ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯ ಮತದಾನ ಆರಂಭವಾಗಿದೆ. ಭದ್ರತಾ ಕಾರಣಗಳಿಗಾಗಿ ಸರ್ಕಾರವು ದೇಶದಲ್ಲಿ ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸಿದೆ.
ವರದಿಯ ಪ್ರಕಾರ, 12 ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿರುವ ಪಾಕಿಸ್ತಾನದಲ್ಲಿ ಬೆಳಗ್ಗೆ 8 ಗಂಟೆಗೆ (ಸ್ಥಳೀಯ ಕಾಲಮಾನ) ಮತದಾನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸಂಜೆ 5 ರವರೆಗೆ ಇರಲಿದೆ. ಸದ್ಯ ಪಾಕಿಸ್ತಾನದ ಹಾಲಿ ಆಂತರಿಕ ಸಚಿವಾಲಯವು ಪಾಕಿಸ್ತಾನದ ಒಟ್ಟಾರೆ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ ಎಂದು ವರದಿಯಾಗಿದೆ.
ದೇಶಾದ್ಯಂತ 90,675 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದೇಶದ ಒಟ್ಟು 12 ಕೋಟಿಗೂ ಹೆಚ್ಚು ನೋಂದಾಯಿತ ಮತದಾರರು ಈ ಮತದಾನದಲ್ಲಿ ಭಾಗವಹಿಸಲಿದ್ದಾರೆ. ಈ ಎಲ್ಲಾ ನೋಂದಾಯಿತ ಮತದಾರರು 5,121 ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಸಾಧ್ಯವಾಗುತ್ತದೆ. ಅಭ್ಯರ್ಥಿಗಳ ಪೈಕಿ 4807 ಪುರುಷರು, 570 ಮಹಿಳೆಯರು ಮತ್ತು ಇಬ್ಬರು ತೃತೀಯಲಿಂಗಿಗಳಿದ್ದಾರೆ.
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ ಒಟ್ಟು 336 ಸದಸ್ಯರ ಆಯ್ಕೆ ನಡೆಯಲಿದೆ. ಅದರಲ್ಲಿ 266 ಕ್ಷೇತ್ರಕ್ಕೆ ಇಂದು ಮತದಾನ ನಡೆಯುತ್ತಿದ್ರೆ 70 ಸ್ಥಾನಗಳು ಮೀಸಲು ಸ್ಥಾನಗಳಾಗಿವೆ. 70ರಲ್ಲಿ 60 ಸ್ಥಾನಗಳು ಮಹಿಳೆಯರಿಗೂ ಹಾಗೂ 10 ಸ್ಥಾನ ಮುಸ್ಲಿಮೇತರರಿಗೆ ಮೀಸಲಿದೆ. 336 ಅಸೆಂಬ್ಲಿ ಸ್ಥಾನಗಳಲ್ಲಿ ಸರ್ಕಾರ ರಚಿಸಲು 169 ಸದಸ್ಯರ ಬೆಂಬಲದ ಅಗತ್ಯವಿದೆ. ಇಂದು ತಡರಾತ್ರಿಯ ಹೊತ್ತಿಗೆ ಅನಧಿಕೃತವಾದ ಫಲಿತಾಂಶ ಹೊರ ಬೀಳಲಿದ್ದು, ಫೆಬ್ರವರಿ 22ರಂದು ಅಧಿಕೃತ ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ.


























