ಮಂಗಳೂರು : ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತಾರತಮ್ಯ ಹಿನ್ನೆಲೆ ಸಂಸದ ನಳಿನ್ ಕುಮಾರ್ ಕಟೀಲ್ ಮನೆಗೆ ಎನ್.ಎಸ್.ಯು.ಐ ಕಾರ್ಯಕರ್ತರಿಂದ ಮುತ್ತಿಗೆಗೆ ಯತ್ನ ನಡೆಯಿತು.

15ನೇ ಹಣಕಾಸು ಆಯೋಗವು ರಾಜ್ಯಕ್ಕೆ ನೀಡಬೇಕಾದ ತೆರಿಗೆ ಹಣದಲ್ಲಿ ಕಡಿತ ಮಾಡಿರುವುದನ್ನು ಖಂಡಿಸಿ ಈ ಮುತ್ತಿಗೆ ನಡೆದಿತ್ತು. ರಾಜ್ಯದ ಪಾಲು ಕಡಿಮೆ ಆಗಿದ್ದರೂ ಸಂಸದರು ಈ ಬಗ್ಗೆ ಚಕಾರ ಎತ್ತಿಲ್ಲ ಎಂಬ ಆರೋಪದಲ್ಲಿ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಂದು ಎನ್ಎಸ್ಯುಐ ಕಾರ್ಯಕರ್ತರು ಮುತ್ತಿಗೆ ಹಾಕಲಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಸಂಸದರ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿತ್ತು.

ಮುನ್ನೆಚ್ಚರಿಕೆ ಕ್ರಮವಾಗಿ ಕಟೀಲು ನಿವಾಸದ ಮುಂದೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತರುವಲ್ಲಿ ಮೌನ ತಾಳಿದ ಹಿನ್ನಲೆ ಬಿಜೆಪಿಗೆ ಧಿಕ್ಕಾರ ಕೂಗುತ್ತಾ ಮನೆ ಮುಂದೆ ಸುಮಾರು 20ಕ್ಕೂ ಹೆಚ್ಚು ಕಾರ್ಯಕರ್ತರು ನುಗ್ಗಲು ಯತ್ನಿಸಿದರು. ಆದರೆ ಸ್ಥಳದಲ್ಲಿ ಇದ್ದ ಪೊಲೀಸರು ಮುತ್ತಿಗೆ ತಡೆದು ಕಾರ್ಯಕರ್ತರನ್ನು ವಶಕ್ಕೆ ಪಡೆದರು ಎಂದು ವರದಿಯಾಗಿದೆ.


























