ಉಡುಪಿ : ವಿದ್ಯಾರ್ಥಿಯೋರ್ವ ಕಟ್ಟಡದ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲ ಮಾಹೆ ವಿವಿಯಲ್ಲಿ ಬೆಳಕಿಗೆ ಬಂದಿದೆ.
ಸಾವನ್ನಪ್ಪಿದ ಯುವಕನನ್ನು ಬಿಹಾರ ಮೂಲದ ಸತ್ಯಂ ಸುಮನ್(19) ಎಂದು ಗುರುತಿಸಲಾಗಿದೆ.
ಸತ್ಯಂ ಸುಮನ್ ಎಂಸಿಎಚ್‌ಪಿ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದು, ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮೊಬೈಲ್ ಮೂಲಕ ಕಾಪಿ ಮಾಡುವ ವೇಳೆ ಸತ್ಯಂ ಸುಮನ್ ಸಿಕ್ಕಿಬಿದ್ದಿದ್ದಾನೆ. ಸಿಕ್ಕಿಬಿದ್ದ ಹಿನ್ನೆಲೆ ಪರೀಕ್ಷಾ ಕೊಠಡಿಯಿಂದ ಆತನನ್ನು ಪರೀಕ್ಷಾ ಉಸ್ತುವಾರಿ ಹೊರದಬ್ಬಿದ್ದಾರೆ. ಇದರಿಂದ ಮನನೊಂದು ಆತ ಪರೀಕ್ಷೆ ನಡೆಯುತ್ತಿದ್ದ ವೇಳೆಯಲ್ಲಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಸತ್ಯಂ ಸುಮನ್ ಕಟ್ಟಡದ 6ನೇ ಮಹಡಿಯಿಂದ ಜಿಗಿದಿದ್ದಾನೆ. ಆತನನ್ನು ಕಂಡು ಇತರ ವಿದ್ಯಾರ್ಥಿಗಳು ಪ್ಯಾನಿಕ್ ಆಗಿದ್ದಾರೆ. ವಿದ್ಯಾರ್ಥಿಗಳು ಗಾಬರಿಯಿಂದ ಓಡಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




























