ಮಂಗಳೂರು: ಎಸ್.ಎಸ್.ಎಲ್.ಸಿ ಪ್ರಿಪರೇಟರಿ ಪರೀಕ್ಷೆ ನಂತರ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿದ್ದಾರೆ.
ಮುಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿ ಬಳಿಯ ನದಿಯಲ್ಲಿ ನಾಲ್ವರ ಮೃತದೇಹ ಪತ್ತೆಯಾಗಿದೆ. ಪರೀಕ್ಷೆ ಬರೆದು ಈಜಲು ತೆರಳಿದ್ದ ನಾಲ್ವರು ನದಿಯಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಸುರತ್ಕಲ್ ಅಗರಮೇಲ್ ನಿವಾಸಿ ಚಂದ್ರಕಾಂತ ಅವರ ಮಗ ಯಶ್ವಿತ್ (15), ಹಳೆಯಂಗಡಿ ತೋಕೂರು ನಿವಾಸಿ ವಸಂತ ಅವರ ಪುತ್ರ ರಾಘವೇಂದ್ರ (15), ಸುರತ್ಕಲ್ ಗೊಡ್ಡೆಕೊಪ್ಲ ನಿವಾಸಿ ವಿಶ್ವನಾಥ ಅವರ ಮಗ ನಿರೂಪ (15), ಚಿತ್ರಾಪುರ ನಿವಾಸಿ ದೇವದಾಸ ಅವರ ಪುತ್ರ ಅನ್ವಿತ್( 15) ಸಾವನ್ನಪ್ಪಿದ್ದಾರೆ.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಸುರತ್ಕಲ್ ಪಟ್ಟಣದ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿದ್ದ ವಿದ್ಯಾರ್ಥಿಗಳು ನಿನ್ನೆ ಎಸ್.ಎಸ್.ಎಲ್.ಸಿ ಇಂಗ್ಲಿಷ್ ಪೂರ್ವಸಿದ್ಧತಾ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆ ಬರೆದು ಶಾಲೆಯಿಂದ ಹೊರಬಂದ 4 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು.
ಎಷ್ಟು ಸಮಯವಾದರೂ ಮಕ್ಕಳು ಮನೆಗೆ ಬಾರದ ಹಿನ್ನೆಲೆ ಪೋಷಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಈಗ ಹಳೆಯಂಗಡಿ ಬಳಿಯ ನದಿಯಲ್ಲಿ ನಾಲ್ವರ ಶವ ಪತ್ತೆಯಾಗಿದೆ.
ಪರೀಕ್ಷೆ ನಂತರ ನದಿಗೆ ಈಜಲು ಹೋಗಿ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.