ನವದೆಹಲಿ : ನಮ್ಮಲ್ಲಿ ಮದುವೆ ಆಗಬೇಕಾದರೆ ಹುಡುಗರಿಗೆ 21 ವರ್ಷ, ಯುವತಿಯರಿಗೆ 18 ತುಂಬಿರಬೇಕು. ಹುಡುಗರ ವಯಸ್ಸು 21 ಮೀರಿದರೂ, ಒಂದೊಳ್ಳೆ ಕೆಲಸ ಸಿಕ್ಕ ಬಳಿಕವಷ್ಟೇ 25 ಮೇಲೆಯೇ ಹುಡುಗರು ಮದುವೆ ಆಗುತ್ತಾರೆ. ಆದರೆ ಇಲ್ಲೊಬ್ಬ ಬಾಲಕನಾಗಿದ್ದಾಗಲೇ ಮದುವೆ ಆಗಲು ಸಿದ್ದವಾಗಿದ್ದಾನೆ.
13 ವರ್ಷದ ಬಾಲಕ, 12 ವರ್ಷದ ಬಾಲಕಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿರುವುದರ ಜೊತೆ ಆಕ್ರೋಶಕ್ಕೆ ಕಾರಣವಾಗಿದೆ.
ಇದು ನಡೆದಿರುವುದು ಪಾಕಿಸ್ತಾನದಲ್ಲಿ. ಪಾಕ್ ಕಾನೂನು ಪ್ರಕಾರ ಪುರುಷರಿಗೆ ಕಾನೂನುಬದ್ಧ ವಿವಾಹ ವಯಸ್ಸು 18 ಆಗಿದ್ದು, ಆದರೆ ಯುವತಿಯರಿಗೆ 16 ಆಗಿದೆ. ಸಿಂಧ್ ಪ್ರಾಂತ್ಯವು ಇಬ್ಬರ ವಯಸ್ಸು 18 ಆಗಿರಬೇಕೆನ್ನುವ ಶಾಸನವನ್ನು 2013ರಲ್ಲಿ ಅಂಗೀಕರಿಸಿದೆ. ಆದರೆ ಇದು ಎಲ್ಲೆಡೆ ಕಾರ್ಯರೂಪಕ್ಕೆ ಬಂದಿಲ್ಲ.
ಆದರೆ ಈ ವಯಸ್ಸಿಗೂ ಮುನ್ನವೇ ನಿಶ್ಚಿತಾರ್ಥ ಮಾಡಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಅಷ್ಟಕ್ಕೂ ಇದು ಎರಡೂ ಮನೆಯವರು ಎದುರು ನಿಂತುಕೊಂಡೇ ಮಾಡಿಕೊಟ್ಟಿರುವ ನಿಶ್ಚಿತಾರ್ಥವಾಗಿದೆ. ಇದಕ್ಕೆ ಮುಖ್ಯ ಕಾರಣ ಬಾಲಕನ ಹಟ.., ಹೌದು ಬಾಲಕ, ತನ್ನ ಪೋಷಕರ ಬಳಿ, ತಾನು ನೋಡಿದ ಹುಡುಗಿಯ ಜೊತೆ ತನಗೆ ವಿವಾಹ ಮಾಡಿಕೊಟ್ಟರೆ ಮಾತ್ರ ತಾನು ಓದುವುದಾಗಿ ಹೇಳಿದ್ದಾನೆ. ಏನೇ ಮಾಡಿದರೂ ಹಟ ಬಿಡದ ಬಾಲಕನ ಮಾತಿಗೆ ಪೋಷಕರು ಮಣಿದಿದ್ದಾರೆ.
ಬಾಲಕಿಯ ತಾಯಿಗೆ 16ನೇ ವಯಸ್ಸಿನಲ್ಲಿ ಮದುವೆಯಾಗಿದೆ. ಇದಕ್ಕಾಗಿ ಮಗಳ ಮದುವೆಗೆ ಅವರು ಒಪ್ಪಿಕೊಂಡಿದ್ದಾರೆ. ಇನ್ನು ಬಾಲಕನ ತಾಯಿಗೆ 25ರ ವಯಸ್ಸಿನಲ್ಲಿ ವಿವಾಹವಾಗಿದ್ದು, ಇಷ್ಟು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗುವ ಮಗನ ಬಯಕೆಯನ್ನು ಅವರು ಬೆಂಬಲಿಸಿದ್ದಾರೆ.
ನಿಶ್ಚಿತಾರ್ಥ ಸಮಾರಂಭದ ವೀಡಿಯೋಗಳು ವೈರಲ್ ಆದ ಬೆನ್ನಲ್ಲೇ ನೆಟ್ಟಿಗರ ಗಮನ ಸೆಳೆದಿದೆ. “ಇದು ಅತಿಯಾಯಿತು” ಎಂದು ಒಬ್ಬರು ಬರೆದುಕೊಂಡಿದ್ದಾರೆ.