ವಿಶ್ವಾದ್ಯಂತ ಜನಪ್ರಿಯತೆ ಹೊಂದಿರುವ ಖ್ಯಾತ ಗಾಯಕಿ ರಿಯಾನಾ ಅವರು ಭಾರತಕ್ಕೆ ಬಂದಿದ್ದಾರೆ. ಮಾರ್ಚ್ 1ರಿಂದ ಮೂರು ದಿನಗಳ ಕಾಲ ನಡೆಯಲಿರುವ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಪ್ರೀ-ವೆಡ್ಡಿಂಗ್ ಸಮಾರಂಭದಲ್ಲಿ ರಿಯಾನಾ ಭಾಗಿ ಆಗುತ್ತಿದ್ದಾರೆ. ಅದೇ ರೀತಿ ಅನೇಕ ಸೆಲೆಬ್ರಿಟಿಗಳು ಕೂಡ ಈ ಸಮಾರಂಭಕ್ಕೆ ಸಾಕ್ಷಿ ಆಗುತ್ತಿದ್ದಾರೆ.
ಬಾಲಿವುಡ್ ಹಾಗೂ ಹಾಲಿವುಡ್ನ ಹಲವು ಮಂದಿ ಈಗಾಗಲೇ ಮದುವೆಯ ಸ್ಥಳಕ್ಕೆ ಆಗಮಿಸಿದ್ದಾರೆ. ಜಗತ್ತಿನಾದ್ಯಂತ ಇರುವ ಪ್ರಮುಖ ಉದ್ಯಮಿಗಳಿಗೆ ಹಾಗೂ ರಾಜಕೀಯ ನಾಯಕರಿಗೆ ಆಹ್ವಾನ ನೀಡಲಾಗಿದೆ. ಅವರೆಲ್ಲರಿಗಿಂತ ಹೆಚ್ಚು ಸುದ್ದಿ ಆಗುತ್ತಿರುವುದು ಗಾಯಕಿ ರಿಯಾನಾ. ಅಚ್ಚರಿ ಏನೆಂದರೆ, ವಿದೇಶದಿಂದ ಭಾರತಕ್ಕೆ ಬರುವಾಗ ರಿಯಾನಾ ಅವರು ವಿಮಾನದಲ್ಲಿ ನಾಲ್ಕು ಗಾಡಿ ಲಗೇಜ್ ತಂದಿದ್ದಾರೆ.
ಜಗತ್ತಿನ ಶ್ರೀಮಂತ ಸೆಲೆಬ್ರಿಟಿಗಳಲ್ಲಿ ರಿಯಾನಾ ಕೂಡ ಇದ್ದಾರೆ. ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಅವರಿಗೆ ಸಖತ್ ಬೇಡಿಕೆ ಇದೆ. ಅನೇಕ ಕಡೆಗಳಲ್ಲಿ ಅವರು ಸಂಗೀತ ಕಾರ್ಯಕ್ರಮ ನೀಡಿ ಫೇಮಸ್ ಆಗಿದ್ದಾರೆ. ಈಗ ಅವರು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಮನರಂಜನೆ ನೀಡಲು ಬಂದಿದ್ದಾರೆ. ಜಾಮ್ನಗರ್ ವಿಮಾನ ನಿಲ್ದಾಣದಲ್ಲಿ ಅವರ ಲಗೇಜ್ಗಳು ಎಲ್ಲರ ಕಣ್ಣು ಕುಕ್ಕಿವೆ.
ಹತ್ತಾರು ಬ್ಯಾಗ್ಗಳನ್ನು ಹಿಡಿದುಕೊಂಡು ಬರುವ ಅತಿಥಿಗಳನ್ನು ನೀವು ನೋಡಿರುತ್ತೀರಿ. ಆದರೆ ನಾಲ್ಕು ದೊಡ್ಡ ಗಾಡಿಯಲ್ಲಿ ಲಗೇಜ್ ತುಂಬಿಕೊಂಡು ಬಂದವರನ್ನು ನೋಡಿರಲಿಕ್ಕಿಲ್ಲ. ಹಾಗಾಗಿ ಎಲ್ಲೆಲ್ಲೂ ರಿಯಾನಾ ಅವರದ್ದೇ ಸುದ್ದಿ ಆಗುತ್ತಿದೆ. ವಿಮಾನ ನಿಲ್ದಾಣದ ಹೊರಗೆ ನಾಲ್ಕು ಗಾಡಿಯಲ್ಲಿ ಲಗೇಜ್ಗಳನ್ನು ಎಳೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಅದನ್ನು ನೋಡಿ ಜನರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
‘ರಿಯಾನಾ ಅವರು ತಮ್ಮ ಮನೆಯನ್ನೇ ಮಡಚಿಕೊಂಡು ಹೀಗೆ ವಿಮಾನದಲ್ಲಿ ತುಂಬಿಕೊಂಡು ಬಂದಿದ್ದಾರಾ’ ಎಂದು ಕೆಲವರು ಪ್ರಶ್ನಿಸಿದ್ದಾರೆ. ರಿಯಾನಾ ಅವರ ಜೊತೆ ಅವರ ಮ್ಯೂಸಿಕ್ ಸಾಧನಗಳು ಕೂಡ ಬಂದಿವೆ. ವೇದಿಕೆಗೆ ಬೇಕಾದ ಪರಿಕರಗಳನ್ನು ಸಹ ಅವರು ತಂದಿದ್ದಾರೆ ಎನ್ನಲಾಗಿದೆ. ಅಲ್ಲದೇ, ಅವರ ತಂಡದ ಹಲವರು ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ದೊಡ್ಡ ದೊಡ್ಡ ಲಗೇಜ್ ಬಾಕ್ಸ್ಗಳನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇನ್ನೊಂದು ಶಾಕಿಂಗ್ ವಿಚಾರ ಏನೇಂದರೆ, ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಲು ರಿಯಾನಾ ಅವರಿಗೆ 74 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ. ಈ ಸುದ್ದಿ ಕೇಳಿ ಎಲ್ಲರೂ ಹುಬ್ಬೇರಿಸಿದ್ದಾರೆ. ಇನ್ನೂ ಹಲವು ಕಲಾವಿದರು ಮೂರು ದಿನದ ಪ್ರೀ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಮನರಂಜನೆ ನೀಡಲಿದ್ದಾರೆ.


























