ಪುತ್ತೂರು : ಪಿಹೆಚ್ಡಿ ವಿದ್ಯಾರ್ಥಿನಿ, ಪುತ್ತೂರಿನ ನಿವಾಸಿ, ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಯುವತಿ ವಿದೇಶಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ.
ದೇರಳಕಟ್ಟೆಯ ಖಾಸಗಿ ಕಾಲೇಜಿನಲ್ಲಿ ಪಿಹೆಚ್ಡಿ ಅಧ್ಯಯನ ಮಾಡುತ್ತಿದ್ದ ಚೈತ್ರಾ ಫೆ.17ರಂದು ತನ್ನ ಸ್ಕೂಟರ್ನೊಂದಿಗೆ ತೆರಳಿದಾಕೆ ವಾಪಸ್ಸಾಗದೆ ನಾಪತ್ತೆಯಾಗಿದ್ದು, ಈ ಬಗ್ಗೆ ಫೆ.18 ರಂದು ಆಕೆಯ ದೊಡ್ಡಪ್ಪ ಉಳ್ಳಾಲ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು.
ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಯುವತಿ ಬಂಟ್ವಾಳ ತಾಲೂಕಿನ ನೇರಳಕಟ್ಟೆ ನಿವಾಸಿಯೋರ್ವನ ಜೊತೆ ಬೆಂಗಳೂರಿಗೆ ತೆರಳಿದ್ದು, ಬಳಿಕ ಹಿಮಾಚಲ ಪ್ರದೇಶದ ಮನಾಲಿಗೆ ತೆರಳಿದ್ದಾಳೆ. ಬಳಿಕ ದೆಹಲಿಗೆ ವಾಪಸ್ಸಾಗಿ ಅಲ್ಲಿಂದ ವಿದೇಶಕ್ಕೆ ತೆರಳಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.
ಇನ್ನು ಈಕೆಯ ಜೊತೆಗೆ ತೆರಳಿರುವ ಯುವಕನನ್ನು ಪತ್ತೆಹಚ್ಚಿರುವ ಪೊಲೀಸರು ಆತನನ್ನು ವಿಚಾರಣೆಗಾಗಿ ಉಳ್ಳಾಲ ಪೋಲೀಸ್ ಠಾಣೆಗೆ ಕರೆ ತಂದಿದ್ದಾರೆ. ಆದರೆ ವಿಚಾರಣೆ ವೇಳೆ ಆತ ಚೈತ್ರಾ ಜೊತೆ ಇದ್ದ ಎನ್ನುವುದಕ್ಕೆ ಯಾವುದೇ ದಾಖಲೆ ಇಲ್ಲದ ಕಾರಣ ವಾಪಸ್ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲದಿಂದ ತಿಳಿದುಬಂದಿದೆ.
ಈ ನಡುವೆ ಚೈತ್ರಾಳಿಗೆ ವಿದೇಶದ ವೀಸಾ ಕಳುಹಿಸಿದವರು ಯಾರು..!!?ವೀಸಾ ಕಳುಹಿಸಿದ ವ್ಯಕ್ತಿಗೂ ಚೈತ್ರಾಳಿಗೂ ಇರುವ ನಂಟೇನು ಎಂಬುದು ಇನ್ನೂ ನಿಗೂಢವಾಗಿದ್ದು, ಈ ಪ್ರಕರಣ ಗೊಂದಲದ ಗೂಡಾಗಿದೆ.

























