ಕಡಬ : ಮೂವರು ವಿದ್ಯಾರ್ಥಿನಿಯರ ಮೇಲೆ ಯುವಕನೋರ್ವನಿಂದ ಆ್ಯಸಿಡ್ ದಾಳಿ ನಡೆದ ಕಡಬ ಸರಕಾರಿ ಪದವಿಪೂರ್ವ ಕಾಲೇಜಿಗೆ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ ನೀಡಿದರು.

ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿರುವ ಕಾರಣ ಮಧ್ಯಾಹ್ನ ಪರೀಕ್ಷೆ ಮುಗಿದ ಬಳಿಕ ಕಾಲೇಜಿಗೆ ಭೇಟಿ ನೀಡಿದ ಶಕುಂತಳಾ ಶೆಟ್ಟಿ, ವಿದ್ಯಾರ್ಥಿನಿಯರ ಜೊತೆ ಸಮಾಲೋಚನೆ ನಡೆಸಿದರು.

ಆ್ಯಸಿಡ್ ದಾಳಿಯ ದಿನ ನಡೆದ ಘಟನಾವಳಿಗಳ ಬಗ್ಗೆ ವಿದ್ಯಾರ್ಥಿನಿಯರು ಮಾಜಿ ಶಾಸಕಿಯವರಿಗೆ ವಿವರಿಸಿದರು. ಸರಕಾರ ಮತ್ತು ಇಡೀ ಆಡಳಿತ ವ್ಯವಸ್ಥೆ ನಿಮ್ಮ ಜೊತೆಗಿದೆ. ನೀವು ಯಾವುದೇ ಕಾರಣಕ್ಕೆ ದೃತಿಗೆಡಬೇಡಿ. ಆರೋಪಿಗೆ ಕಠಿಣ ಶಿಕ್ಷೆಯಾಗಲಿದೆ. ಸರಕಾರಿ ಕಾಲೇಜಿನಲ್ಲಿ ಭದ್ರತೆಯಿಲ್ಲ ಎಂಬ ಭಾವನೆ ಬೇಡ. ಎಲ್ಲ ರೀತಿಯ ಸುರಕ್ಷತೆ ಒದಗಿಸಲಾಗುವುದು. ಆದರೂ ಕೆಲವೊಂದು ವಿಚಾರಗಳಲ್ಲಿ ವಿದ್ಯಾರ್ಥಿನಿಯರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಆ್ಯಸಿಡ್ ಎರಚಿದ ದುಷ್ಕರ್ಮಿಯನ್ನು ತಕ್ಷಣ ಹಿಡಿದು ತಪ್ಪಿಸಿಕೊಳ್ಳದಂತೆ ನೋಡಿಕೊಂಡ ಕಾಲೇಜಿನ ವಿದ್ಯಾರ್ಥಿಗಳ ಸಾಹಸವನ್ನು ಅವರು ಕೊಂಡಾಡಿದರು.

ಬೇಡಿಕೆ ಸಲ್ಲಿಕೆ
ಕಡಬ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 170 ವಿದ್ಯಾರ್ಥಿನಿಯರಿದ್ದಾರೆ. ಇಷ್ಟು ಹೆಣ್ಮಕ್ಕಳಿಗೆ ಕೇವಲ ಒಂದು ಶೌಚಾಲಯವಿರುವುದರಿಂದ ಬಹಳಷ್ಟು ಸಮಸ್ಯೆಯಾಗುತ್ತಿದೆ. ಹೆಚ್ಚುವರಿ ಶೌಚಾಲಯದ ವ್ಯವಸ್ಥೆ ಮಾಡಿಕೊಡಬೇಕೆಂದು ವಿದ್ಯಾರ್ಥಿನಿಯರು ಮನವಿ ಮಾಡಿದರು. ಈ ಬಗ್ಗೆ ಸರಕಾರದ ಗಮನಕ್ಕೆ ತಂದು ವ್ಯವಸ್ಥೆ ಮಾಡುವುದಾಗಿ ಶಕುಂತಳಾ ಶೆಟ್ಟಿ ಭರವಸೆ ನೀಡಿದರು. ಕಾಲೇಜಿನ ಆವರಣಗೋಡೆ ಇಲ್ಲದಿರುವ ಬಗ್ಗೆಯೂ ವಿದ್ಯಾರ್ಥಿಗಳು ತಿಳಿಸಿದರು.

























