ಸುಳ್ಯ : ಮನೆ ಮಾಲಕರ ನಿರ್ಲಕ್ಷ್ಯ ಹಿನ್ನೆಲೆ ಕೆಲಸಕ್ಕೆ ಬಂದ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವುದಾಗಿ ದೂರು ನೀಡಿದ್ದು, ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಸರಗೋಡು ಮೂಲದ ಅಬ್ದುಲ್ ಜಬ್ಬಾರ್ ಎನ್.ಎಂ (42) ಮೃತರು. ಅವರ ಸಹೋದರ ಅಬ್ದುಲ್ ಖಾದರ್ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಅಬ್ದುಲ್ ಜಬ್ಬಾರ್ ಎನ್.ಎಂ ಎಂಬವರು ಪೈಂಟಿಂಗ್ ಕೆಲಸವನ್ನು ಮಾಡಿಕೊಂಡಿದ್ದು, ಮಾ.7 ರಂದು ಬೆಳಿಗ್ಗೆ, ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಅಡ್ಕಾರ್ ನಿವಾಸಿ ಜಿ,ಪಿ ಅಬ್ದುಲ್ಲಾ ಕುಂಞ ರವರ ಮನೆಯ ಗೋಡೆಗಳಿಗೆ ಪೈಂಟಿಂಗ್ ಮಾಡಲು ತನ್ನ ಸ್ನೇಹಿತರೊಂದಿಗೆ ಹೋಗಿದ್ದು, ಅಲ್ಲಿ ಕೆಲಸ ಮಾಡುತ್ತಿರುವಾಗ ಅಬ್ದುಲ್ ಜಬ್ಬಾರ್ ರವರು ಆಕಸ್ಮಿಕವಾಗಿ ಕಾಲು ಜಾರಿ ಮೇಲಿಂದ ಬಿದ್ದು ಗಾಯಗೊಂಡಿದ್ದು, ಅವರನ್ನು ಅಲ್ಲೇ ಇದ್ದ ಅವರ ಸ್ನೇಹಿತರು ಹಾಗೂ ಮನೆಯ ಮಾಲಕ ಅಬ್ದುಲ್ಲಾ ರವರು ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿರುತ್ತದೆ. ಸಹೋದರ ಅಬ್ದುಲ್ ಜಬ್ಬಾರ್ ರನ್ನು ಮನೆಗೆ ಕರೆದುಕೊಂಡು ಬಂದಿದ್ದು, ಅಬ್ದುಲ್ ಜಬ್ಬಾರ್ ರವರ ದೇಹವು ನಿಷ್ಕ್ರಿಯವಾಗಿರುವುದನ್ನು ಕಂಡು ಕೂಡಲೇ ಆಂಬ್ಯುಲೆನ್ಸ್ ವೊಂದರಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಮನೆಯ ಮಾಲಕ ಜಿ.ಪಿ ಅಬ್ದುಲ್ಲಾ ರವರು ಯಾವುದೇ ಮುಂಜಾಗ್ರತೆ ಇಲ್ಲದೇ, ನಿರ್ಲಕ್ಷತನವಹಿಸಿ ಕೆಲಸ ಮಾಡಿಸಿರುವುದರಿಂದ ಅಬ್ದುಲ್ ಜಬ್ಬಾರ್ ರವರು ಬಿದ್ದು ಗಾಯಗೊಂಡು ಮೃತಪಟ್ಟಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ,ಕ್ರ ನಂ: 42/2024 ಕಲಂ: 304 (A) ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























