ಕಾಜಿರಂಗ ರಾಷ್ಟ್ರೀಯ ಉದ್ಯಾನವನದಿಂದ ತಮ್ಮ ವೀಕೆಂಡ್ ದಿನಚರಿ ಆರಂಭಿಸಿರುವ ಪ್ರಧಾನಿ ಮೋದಿ ಅವರು ಇಂದು ವಿಶ್ವದ ಅತಿ ಉದ್ದದ bi-lane (Sela Tunnel) ಸುರಂಗವನ್ನು ಉದ್ಘಾಟಿಸಿದ್ದಾರೆ.
ಅರುಣಾಚಲ ಪ್ರದೇಶದ ಇಟಾನಗರದಲ್ಲಿ ನಿರ್ಮಾಣ ಆಗಿರುವ ವಿಶ್ವದ ಅತಿ ಉದ್ದದ ಸುರಂಗ (ಸೆಲಾ ಸುರಂಗ) ಉದ್ಘಾಟನೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಸೆಲಾ ಸುರಂಗವು ಅರುಣಾಚಲ ಪ್ರದೇಶದ ತವಾಂಗ್ನ ಸೆಲಾ ಪಾಸ್ಗೆ ಕನೆಕ್ಟಿವಿಟಿ ಕಲ್ಪಿಸುತ್ತದೆ. ಅದನ್ನು ಸುಮಾರು 825 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 2019ರಲ್ಲಿ ಮೋದಿ ಸುರಂಗ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದರು. ಎರಡು ಸುರಂಗಳನ್ನು ಹೊಂದಿರುವ ಇದು 13000 ಫೀಟ್ ಉದ್ದ ಇದೆ.
ಅಭಿವೃದ್ಧಿ ಹೊಂದಿದ ಭಾರತ, ಅಭಿವೃದ್ಧಿ ಹೊಂದಿದ ಈಶಾನ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಇಡೀ ಈಶಾನ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಾಲ್ಕು ಪಟ್ಟು ವೇಗವಾಗಿ ನಡೆಯುತ್ತಿವೆ. ಅಭಿವೃದ್ಧಿ ಹೊಂದಿದ ರಾಜ್ಯದಿಂದ ಅಭಿವೃದ್ಧಿ ಹೊಂದಿದ ಭಾರತದ ಕಾರ್ಯಕ್ರಮಗಳು ದೇಶಾದ್ಯಂತ ವೇಗವಾಗಿ ಮುಂದುವರಿಯುತ್ತಿವೆ. ಅಭಿವೃದ್ಧಿ ಹೊಂದಿದ ಈಶಾನ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದುಕೊಂಡಿದ್ದೇನೆ ಎಂದರು.
ಇಂದು 55 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಪ್ರಾಜೆಕ್ಟ್ಗಳ ಉದ್ಘಾಟನೆ, ಶಂಕುಸ್ಥಾಪನೆ ನಡೆದಿದೆ. ಅರುಣಾಚಲ ಪ್ರದೇಶದ 35 ಸಾವಿರ ಬಡ ಕುಟುಂಬಗಳಿಗೆ ಶಾಶ್ವತ ಮನೆ ಸಿಕ್ಕಿದೆ. ಅರುಣಾಚಲ ಪ್ರದೇಶ ಮತ್ತು ತ್ರಿಪುರದ ಸಾವಿರಾರು ಕುಟುಂಬಗಳು ಸಂಪರ್ಕ ಪಡೆದಿವೆ ಎನ್ನಲಾಗುತ್ತಿದೆ.


























