ಉಡುಪಿ : ಜಿಲ್ಲೆಯ ಹಿರಿಯ ಆರ್.ಎಸ್.ಎಸ್ ಕಾರ್ಯಕರ್ತ ಪಾಂಡುರಂಗ ಶಾನಬಾಗ್ ಅವರು ಅಯೋಧ್ಯೆ ರಾಮಮಂದಿರದ ಬಳಿ ಹೃದಯಾಘಾತದಿಂದ ನಿಧನರಾದರು.
ಆರ್.ಎಸ್.ಎಸ್ ಸಂಘದಲ್ಲಿ ಅತ್ಯಂತ ಸಕ್ರಿಯರಾಗಿದ್ದ ಶಾನುಭಾಗ್ ಅವರು ಅಯೋಧ್ಯೆಯಲ್ಲಿ ರಾಮನ ದರ್ಶನ ಪಡೆದು ರಾಮನ ಪಾದಮೂಲದಲ್ಲೇ ಜೀವನಯಾತ್ರೆ ಮುಗಿಸಿದರು.
ನಿನ್ನೆ ಬೆಳಗ್ಗೆ ಶ್ರೀರಾಮನ ದರ್ಶನ ಪಡೆದ ನಂತರ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ಕಲಶಾಭಿಷೇಕ ತೀರ್ಥ ಪ್ರಸಾದ ಸ್ವೀಕರಿಸಿ ಸಂತಸದಿಂದ ತೆರಳಿದ್ದರು. ಸಂಜೆ ಪಲ್ಲಕ್ಕಿ ಉತ್ಸವಕ್ಕೆ ಆಗಮಿಸುವ ವೇಳೆ ದೇವಸ್ಥಾನದ ಹೊರ ದ್ವಾರದ ಬಳಿ ಶಾನುಭಾಗ್ ಅವರಿಗೆ ಹೃದಯಾಘಾತವಾಗಿದೆ. ಅವರ ಸಂಬಂಧಿಕರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶಾನುಭಾಗ್ ಅವರು ಕೊನೆಯುಸಿರೆಳೆದರು.
ಪಾಂಡುರಂಗ ಶಾನುಭಾಗ್ ಅವರ ನಿಧನದ ಬಗ್ಗೆ ಪೇಜಾವರ ಶ್ರೀ ದುಃಖ ವ್ಯಕ್ತಪಡಿಸಿದ್ದಾರೆ. ಅವರ ಆತ್ಮಕ್ಕೆ ರಾಮನು ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ಶಾನುಭಾಗ್ ಅವರು ರಾಮನ ದರ್ಶನ ಪಡೆದ ನಂತರ ಪೇಜಾವರ ಶ್ರೀಗಳನ್ನು ಭೇಟಿಯಾಗಿದ್ದರು.


























