ಕಡಬ : ರಾಮಕುಂಜ ಗ್ರಾಮದ ಗೋಳಿತ್ತಡಿಯ ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವುಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಸಿದ್ಧಿಕ್ ಎಂಬವರು ನೀಡಿರುವ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದಿಕ್ ರವರ ತಾಯಿ ರಾಮಕುಂಜ ಗ್ರಾಮದ ಗೋಳಿತ್ತಡಿ ಎಂಬಲ್ಲಿ ತನ್ನ ಮಗಳು, ಅಳಿಯ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದು, ಮಾ.7 ರಂದು ಮಗಳ ಡೆಲಿವರಿಗಾಗಿ ತಾಯಿ ಹಾಗೂ ಮನೆಯ ಸದಸ್ಯರೆಲ್ಲರೂ ಮನೆಗೆ ಬೀಗ ಹಾಕಿ, ಮಂಗಳೂರಿನ ಆಸ್ಪತ್ರೆಗೆ ತೆರಳಿದ್ದು, ಮಾ.11 ರಂದು ಮಧ್ಯಾಹ್ನ ಸಮಯ ಮನೆಗೆ, ಸಂಬಂಧಿಯೊರ್ವರು ಮನೆಯನ್ನು ನೋಡಿಕೊಂಡು ಬರುವ ಸಲುವಾಗಿ ಬಂದಾಗ, ಮನೆಯ ಹಿಂಬದಿಯ ಬಾಗಿಲು ಮುರಿದಿರುವುದು ಕಂಡುಬಂದಿರುತ್ತದೆ.
ಈ ಬಗ್ಗೆ ಮಾಹಿತಿ ದೊರೆತ ಸಿದ್ಧಿಕ್ ರವರು ಬಂದು ಮನೆಯನ್ನು ಪರಿಶೀಲಿಸಿದಾಗ, ರೂಮಿನ ಕಪಾಟಿನಲ್ಲಿಟ್ಟಿದ್ದ ರೂ 1,08,000/ ನಗದು ಹಾಗೂ ಸುಮಾರು 13 ಪವನ್ ಚಿನ್ನಾಭರಣ ( ಅಂದಾಜು ರೂ 5,20,000/-ಮೌಲ್ಯ) ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವುದು ಕಂಡುಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 35/2024, ಕಲಂ:454.457.380 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























