ಬೆಂಗಳೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸಂಸದ ಪ್ರತಾಪ್ ಸಿಂಹ ಅವರ ಕೈತಪ್ಪುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಕ್ಷೇತ್ರದಲ್ಲಿ ಕೆಲಸ ಹಾಗೂ ಹಿಂದುತ್ವದ ಮೇಲೆ ಗುರುತಿಸಿಕೊಂಡಿರುವ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪುತ್ತಿರುವ ವಿಚಾರ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸ್ವತಃ ಪ್ರತಾಪ್ ಸಿಂಹ ಅವರೇ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ ಅವರು ಸಂಸದರನ್ನು ಆಹ್ವಾನಿಸಿದ್ದರು. ಅದರಂತೆ ಅಗರ್ವಾಲ್ ಅವರನ್ನು ಭೇಟಿಯಾದ ಪ್ರತಾಪ್ ಸಿಂಹ ಸುದೀರ್ಘ ಚರ್ಚೆ ನಡೆಸಿ ತನ್ನ ಸಾಧನೆಯ ವರದಿ ಒಪ್ಪಿಸಿದರು ಎಂದು ವರದಿಯಾಗಿದೆ.
ಅಗರ್ವಾಲ್ ಭೇಟಿ ಬಳಿಕ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ ಪ್ರತಾಪ್ ಸಿಂಹ, ಟಿಕೆಟ್ ಸಿಗುವ ವಿಶ್ವಾಸವನ್ನು ವ್ಯಕ್ತಪಡಿಸಿದರು. “ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ನಾನು ಕೇವಲ ಒಂದು ಗಂಟೆ ಭೇಟಿ ಮಾಡಿದೆ. ನಾನು ಮೊದಲೇ ಹೇಳಿದ್ದೇನೆ ಮತ್ತು ಮತ್ತೊಮ್ಮೆ ಹೇಳುತ್ತಿದ್ದೇನೆ, ನರೇಂದ್ರ ಮೋದಿ ಇಲ್ಲದೆ ನಾನು ಏನೂ ಅಲ್ಲ. ನನಗೆ ಟಿಕೆಟ್ ಸಿಗುತ್ತದೆ ಎಂದು ಭಾವಿಸುತ್ತೇನೆ, ಇಲ್ಲದಿದ್ದರೆ ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಧನ್ಯವಾದ” ಎಂದು ಬರೆದುಕೊಂಡಿದ್ದಾರೆ.
ಮೈಸೂರು ಹಾಲಿ ಸಂಸದ ಪ್ರತಾಪ್ ಸಿಂಹರಿಗೆ ಟಿಕೆಟ್ ಮಿಸ್ ಆಗುತ್ತೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಸದ್ಯದ ಹಾಟ್ ಟಾಪಿಕ್ ಆಗಿದೆ. 10 ವರ್ಷ ಉತ್ತಮ ಕೆಲಸ ಮಾಡಿದರೂ ಪಕ್ಷ ಟಿಕೆಟ್ ನಿರಾಕರಿಸುತ್ತಿರುವುದಕ್ಕೆ ಕಾರಣ ಏನು ಎನ್ನುವುದು ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ.



























