ಬೆಂಗಳೂರು : ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರಿಗೆ ಒಂದೆಡೆ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಟಿಕೆಟ್ ದೊರೆಯುತ್ತದೆಯೇ ಎಂಬ ಅನುಮಾನ ಸೃಷ್ಟಿಯಾಗಿದ್ದು, ಈ ಮಧ್ಯೆ, ಅವರು ಕಾಂಗ್ರೆಸ್ ಸೇರುವ ಸಾಧ್ಯತೆಗಳೂ ಇವೆ ಎಂಬ ವದಂತಿಯೂ ಹರಿದಾಡುತ್ತಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸದಾನಂದ ಗೌಡ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಜನತೆಗೆ ಅಭಿನಂದನೆಗಳ ಸಲ್ಲಿಸಿ ಪೋಸ್ಟ್ ವೊಂದನ್ನು ಹಾಕಿದ್ದು, ಅಚ್ಚರಿಗೆ ಕಾರಣವಾಗಿದೆ.
ಸದಾನಂದ ಗೌಡ ಹಾಕಿದ ಪೋಸ್ಟ್ ನಲ್ಲೇನಿದೆ..!?
ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಗೌಡರು., ‘ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನನ್ನೆಲ್ಲಾ ಪ್ರೀತಿಯ ಬಂಧುಗಳೇ, ನನಗೆ ಕಳೆದ ಹತ್ತು ವರ್ಷಗಳ ಕಾಲ ಈ ಕ್ಷೇತ್ರದ ಲೋಕಸಭಾ ಸದಸ್ಯನಾಗಿ, ನಿಮ್ಮ ಕೆಲಸ ಮಾಡುವ ಅವಕಾಶವನ್ನು ಮಾಡಿಕೊಟ್ಟು ಆಶೀರ್ವಾದವನ್ನು ಮಾಡಿದ್ದೀರಿ.
ನಾನು ನನ್ನ ಶಕ್ತಿಮೀರಿ ನಿಮ್ಮ ಸೇವೆಯನ್ನು ಮಾಡುವ ಪ್ರಯತ್ನವನ್ನು ಮಾಡಿದ್ದೇನೆ. ನಿಮ್ಮ ಆಶೀರ್ವಾದದಿಂದ ಕೇಂದ್ರದಲ್ಲಿ ನಮ್ಮೆಲ್ಲರ ಪ್ರೀತಿಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜೊತೆಯಲ್ಲಿ 7 ವರ್ಷಗಳ ಕಾಲ ಕ್ಯಾಬಿನೆಟ್ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶವನ್ನು ಕೂಡ ಕಲ್ಪಿಸಿದ್ದೀರಿ.
ನಾನು ನಿಮ್ಮೆಲ್ಲರಿಗೂ ಚಿರಋಣಿ. ನಿಮ್ಮ ಜೊತೆಗೆ ಇನ್ನು ಮುಂದೆಯೂ ಇರುತ್ತೇನೆ. ಎಲ್ಲರಿಗೂ ನನ್ನ ಅಂತರಾಳದ ಹೃದಯ ತುಂಬಿದ ಧನ್ಯವಾದಗಳು’.. ಇಂತಿ ನಿಮ್ಮವನೇ ಆದ ಡಿ.ವಿ. ಸದಾನಂದ ಗೌಡ ಎಂದು ಬರೆದುಕೊಂಡಿದ್ದು, ಈ ವಿಚಾರದ ಬಗ್ಗೆ ಇದೀಗ ಭಾರೀ ಚರ್ಚೆ ನಡೆಯುತ್ತಿದೆ.
ಯಾವ ಕಾರಣಕ್ಕಾಗಿ ಈ ರೀತಿ ಪೋಸ್ಟ್ ಹಾಕಿರಬಹುದು..,! ಚುನಾವಣಾ ನಿವೃತ್ತಿ ಪಡೆಯುತ್ತಾರೆಯೇ ಅಥವಾ ಕಾಂಗ್ರೆಸ್ ಪಕ್ಷ ಸೇರುತ್ತಾರೆಯೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ.



























