ಮಂಗಳೂರು : ಲಕ್ಷದ್ವೀಪಕ್ಕೆ ಹೊರಟಿದ್ದ ಸರಕು ತುಂಬಿದ ಮಂಜಿ ಬೋಟ್ ಸಮುದ್ರದಲ್ಲಿ ಮುಳುಗಡೆ ಆಗಿದ್ದು, ಅನ್ನ, ನೀರಿಲ್ಲದೇ ಸಮುದ್ರದಲ್ಲಿ ಮೂರು ದಿನ ಕಳೆದ ಮಂಜಿ ಬೋಟ್ನಲ್ಲಿದ್ದ ಸಿಬ್ಬಂದಿಗಳನ್ನು ಮೀನುಗಾರರು ರಕ್ಷಣೆ ಮಾಡಿರುವಂತಹ ಘಟನೆ ನಡೆದಿದೆ.
ಮಾ.12ರಂದು ಮಂಗಳೂರಿನಿಂದ ಜಲ್ಲಿ, ಸಿಮೆಂಟ್ ಇನ್ನಿತರೆ ಸಾಮಾಗ್ರಿ ಹೊತ್ತು ತೆರಳಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಸಮುದ್ರ ಮಧ್ಯೆ ಬೋಟ್ ಮುಳುಗಿದೆ. ಸಮುದ್ರಕ್ಕೆ ಹಾರಿ ಮಂಜಿಯ ಕ್ಯಾಪ್ಟನ್ ಮತ್ತು ಸಿಬ್ಬಂದಿ ಜೀವ ಉಳಿಸಿಕೊಂಡಿದ್ದಾರೆ.
ಆಳವಾದ ಸಮುದ್ರದಲ್ಲಿ ತಮ್ಮ ಜೀವ ರಕ್ಷಣೆಗಾಗಿ ಹಾತೊರೆಯುತ್ತಿದ್ದ ಸಿಬ್ಬಂದಿಗಳನ್ನು ಲಕ್ಷದ್ವೀಪ ಬಳಿಯ ಕಲ್ಪೇನಿ ದ್ವೀಪದ ಮೀನುಗಾರರು ಒಟ್ಟು ಎಂಟು ಜನರನ್ನು ರಕ್ಷಣೆ ಮಾಡಿ, ದ್ವೀಪಕ್ಕೆ ಕರೆದೊಯ್ದು ಉಪಚರಿಸಿದ್ದಾರೆ.
ಮುಳುಗಡೆಗೆಯ ವಿಚಾರ ತಿಳಿದ ಮಂಗಳೂರು ಕೋಸ್ಟ್ ಗಾರ್ಡ್ ಮೂರು ದಿನಗಳಿಂದ ಸಮುದ್ರದಲ್ಲಿ ಹುಡುಕಾಟ ನಡೆಸಿದ್ದರು. ಆದರೆ ರಕ್ಷಣೆ ವಿಷಯ ತಿಳಿದು ಸ್ಪೀಡ್ ಬೋಟ್ ಮೂಲಕ ಕೇರಳದ ಕೊಚ್ಚಿಗೆ ತೆರಳಿ ಎಲ್ಲರನ್ನು ಕೋಸ್ಟ್ ಗಾರ್ಡ್ ಕರೆತಂದಿದ್ದಾರೆ.

























