ಶಾಲೆಯಲ್ಲಿ ಪಾಠ ಕಲಿಸುವ ಗುರುಗಳು ಅಂದ್ರೆ ಮಕ್ಕಳಿಗೆ ಪೂಜ್ಯ ಭಾವ. ಆದರೆ ಬುದ್ಧಿವಾದ ಹೇಳುವ ಶಿಕ್ಷಕರೇ ದಾರಿ ತಪ್ಪಿದರೆ ತಿದ್ದಿ ನಡೆಸುವವರು ಯಾರು? ಛತ್ತೀಸ್‌ಗಡ ರಾಜ್ಯದ ಬಸ್ತರ್ ಜಿಲ್ಲೆಯಲ್ಲಿ ಇಂತಹದೇ ಒಂದು ಘಟನೆ ಬೆಳಕಿಗೆ ಬಂದಿದೆ. ತಪ್ಪು ಮಾಡಿದ ಶಿಕ್ಷಕನಿಗೆ ಶಾಲೆಯ ಮಕ್ಕಳೇ ಸರಿಯಾದ ಪಾಠ ಕಲಿಸಿದ್ದಾರೆ.
ಬಸ್ತರ್ ಜಿಲ್ಲೆಯ ಈ ಶಿಕ್ಷಕ ಪ್ರತಿದಿನ ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದ. ಕುಡಿದು ಬರುವುದಲ್ಲದೇ ಶಾಲೆಯಲ್ಲಿ ಮಕ್ಕಳನ್ನು ಕೆಟ್ಟದಾಗಿ ನಿಂದಿಸುತ್ತಿದ್ದ. ಕುಡುಕ ಶಿಕ್ಷಕನ ವರ್ತನೆಗೆ ರೋಸಿ ಹೋದ ಮಕ್ಕಳು ಇಂದು ಸಖತ್ತಾಗೇ ಬಿಸಿ ಮುಟ್ಟಿಸಿದ್ದಾರೆ.
ಎಂದಿನಂತೆ ಮದ್ಯಪಾನ ಮಾಡಿದ ಶಿಕ್ಷಕ ತನ್ನ ಬೈಕ್‌ನಲ್ಲಿ ಶಾಲೆಗೆ ಬರುತ್ತಿದ್ದ. ಆಗ ರೋಸಿ ಹೋಗಿದ್ದ ಮಕ್ಕಳು ಕಲ್ಲು, ಚಪ್ಪಲಿಯಿಂದ ಹೊಡೆದಿದ್ದಾರೆ. ಶಾಲೆಗೆ ಕುಡುಕ ಶಿಕ್ಷಕ ಬರುತ್ತಿದ್ದಂತೆ ಅಟ್ಟಾಡಿಸಿಕೊಂಡು ಹೋಗಿ ಚಪ್ಪಲಿಯನ್ನು ಎಸೆದಿದ್ದಾರೆ. ಛತ್ತೀಸ್‌ಗಡ ಶಾಲೆಯ ಮಕ್ಕಳ ಈ ಆಕ್ರೋಶದ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಶಿಕ್ಷಕನಿಗೆ ಬುದ್ಧಿ ಕಲಿಸಿದ ಮಕ್ಕಳ ವಿಡಿಯೋ ವೈರಲ್ ಆಗಿದ್ದು, ಮಕ್ಕಳ ಕಾರ್ಯಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ.



























