ಮುಂಬೈ : ಸಿಗರೇಟ್ ಸೇವನೆ ಮಾಡುತ್ತಿರುವುದನ್ನ ಗುರಾಯಿಸಿ ನೋಡಿದ್ದಕ್ಕೆ ಯುವತಿಯೊಬ್ಬಳು ಚಾಕುವಿನಿಂದ ಇರಿದು ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಮನೆವಾಡ ಸಿಮೆಂಟ್ ರೋಡ್ನಲ್ಲಿ ನಡೆದಿದೆ.
ರಂಜಿತ್ ರಾಥೋಡ್ ಕೊಲೆಯಾದ ವ್ಯಕ್ತಿ.
ಜಯಶ್ರೀ ಪಂಢರೆ, ಸವಿತಾ ಸಾಯರೆ, ಆಕಾಶ್ ಎನ್ನುವ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಇನ್ನೊಬ್ಬನಿಗಾಗಿ ಶೋಧಕಾರ್ಯ ನಡೆಸಿದ್ದಾರೆ. ಪಾನ್ ಶಾಪ್ವೊಂದರಲ್ಲಿ ಜಯಶ್ರೀ ಸಿಗರೇಟ್ ಸೇವನೆ ಮಾಡುತ್ತಿರುವುದನ್ನ ವ್ಯಕ್ತಿ ಗುರಾಯಿಸಿಕೊಂಡು ನೋಡಿದ್ದಾನೆ. ಇದಕ್ಕೆ ಜಗಳ ತೆಗೆದ ಆಕೆ ವ್ಯಕ್ತಿಗೆ ಮನಬಂದಂತೆ ನಿಂದಿಸಿದ್ದಾಳೆ. ಇದನ್ನು ವ್ಯಕ್ತಿಯು ತನ್ನ ಫೋನ್ನಲ್ಲಿ ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಹಾಗೇ ನಿಂದಿಸುತ್ತ ಸಿಗರೇಟ್ ಹೊಗೆಯನ್ನು ವ್ಯಕ್ತಿಯ ಮೇಲೆ ಬಿಟ್ಟಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಆಕೆ ತನ್ನ ಸ್ನೇಹಿತರಿಗೆ ಫೋನ್ ಮಾಡಿ ಕರೆಯಿಸಿಕೊಂಡಿದ್ದಾಳೆ ಎನ್ನಲಾಗಿದೆ.
ಇಬ್ಬರು ಸ್ನೇಹಿತರ ಜೊತೆ ವ್ಯಕ್ತಿಯ ಮನೆಗೆ ತೆರಳಿದ ಆಕೆ ಮತ್ತೆ ಗಲಾಟೆ ಮಾಡಿ ಚಾಕುವಿನಿಂದ ವ್ಯಕ್ತಿಗೆ ಹೇಗೆಂದರೆ ಹಾಗೇ ತಿವಿದಿದ್ದಾಳೆ. ಇದರಿಂದ ರಕ್ತದ ಮಡುವಿನಲ್ಲೇ ವ್ಯಕ್ತಿ ಸಾವನ್ನಪ್ಪಿದ್ದಾನೆ. ಬಳಿಕ ಸ್ಥಳದಿಂದ ಆರೋಪಿಗಳು ಕಾಲ್ಕಿತ್ತಿದ್ದರು.
ಈ ಸಂಬಂಧ ಶೋಧ ಮಾಡಿ ಮೂವರನ್ನು ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.


























