ಮಂಗಳೂರು : ಮೆಲ್ಕಾರ್ ಸಮೀಪ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳ ಮೇಲಿನ ಆರೋಪವು ನ್ಯಾಯಾಲಯದಲ್ಲಿ ಸಾಬೀತಾಗಿದೆ.
ಮಹಮ್ಮದ್ ನಾಸಿರ್ ಕೊಲೆ ಪ್ರಕರಣ
2015ರ ಆ.6 ರಂದು ಮೊಹಮ್ಮದ್ ಮುಸ್ತಾಫ ಮತ್ತು ಮೊಹಮ್ಮದ್ ನಾಸೀರ್ ಮೆಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ಆಟೋರಿಕ್ಷಾದಲ್ಲಿ ಹೋಗುತ್ತಿದ್ದಾಗ ವಿಜೇತ್ ಕುಮಾರ್, ಕಿರಣ್, ಅನೀಶ್ (ಧನು) ಮತ್ತು ಅಭಿ (ಅಭಿಜಿತ್) ಬೈಕ್‌ನಲ್ಲಿ ಬಂದು ರಾತ್ರಿ 10.45ಕ್ಕೆ ಸಜೀಪ ಮೂಡ ಗ್ರಾಮದ ಕೊಳಕೆ ಎಂಬಲ್ಲಿ ಆಟೋರಿಕ್ಷಾ ತಡೆದು ನಿಲ್ಲಿಸಿ ತಲವಾರಿನಿಂದ ಹಲ್ಲೆ ನಡೆಸಿದ್ದರು. ಇದರಿಂದ ಮೊಹಮ್ಮದ್ ಮುಸ್ತಾಫ ಮತ್ತು ನಾಸಿರ್ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ನಾಸೀರ್ ಮೃತಪಟ್ಟಿದ್ದರು.

ಕೊಲೆ ಪ್ರಕರಣದ ಬಗ್ಗೆ ಇನ್‌ಸ್ಪೆಕ್ಟರ್ ಕೆ.ಯು. ಬೆಳ್ಳಿಯಪ್ಪ ತನಿಖೆ ಪೂರ್ಣಗೊಳಿಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 29 ಸಾಕ್ಷಿದಾರರನ್ನು ವಿಚಾರಿಸಿ 40 ದಾಖಲೆಗಳನ್ನು ಗುರುತಿಸಲಾಗಿದೆ. 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಎಚ್.ಎಸ್. ಅವರು ಆರೋಪಿಗಳು ದೋಷಿಗಳೆಂದು ಎ.8 ರಂದು ತೀರ್ಪು ನೀಡಿದ್ದಾರೆ.
ಶಿಕ್ಷೆಯ ಪ್ರಮಾಣದ ಮೇಲಿನ ವಿಚಾರಣೆಯನ್ನು ಎ.16ಕ್ಕೆ ನಿಗದಿಪಡಿಸಲಾಗಿದೆ. ಸರಕಾರದ ಪರ ಸರಕಾರಿ ಅಭಿಯೋಜಕರಾದ ಶೇಖರ ಶೆಟ್ಟಿ ವಿಚಾರಣೆ ನಡೆಸಿದ್ದು, ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ವಾದ ಮಂಡಿಸಿದ್ದರು.



























