ಪುತ್ತೂರು : ವಾಹನ ಮಾಲಕರಾದ ಹೆಚ್. ಮಧುಕರ್ ಆಚಾರ್ ರವರು 01/12/2007 ರಿಂದ 28/02/2015 ರವರೆಗೆ ರೂ. 99,069/- ರೂಗಳನ್ನು ಸಾರಿಗೆ ಇಲಾಖೆಗೆ ತೆರಿಗೆ ಪಾವತಿ ಬಾಕಿ ಇದ್ದು ಅದನ್ನು ವಸೂಲಿ ಮಾಡಿಕೊಡಬೇಕೆಂದು ಕೋರಿ ಸಾರಿಗೆ ಇಲಾಖೆ ಪುತ್ತೂರು ಸಲ್ಲಿಸಿದ ಪ್ರಕರಣವೊಂದರಲ್ಲಿ ಆರೋಪಿಯೆನ್ನಲಾಗಿದ್ದ ಹೆಚ್. ಮಧುಕರ್ ಎಂಬವರರನ್ನು ಪುತ್ತೂರಿನ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ರವರ ನ್ಯಾಯಾಧೀಶರಾದ ಶಿವಣ್ಣ ಹೆಚ್.ಆರ್ ನಿರಪರಾಧಿಯೆಂದು ಆದೇಶಿಸಿ ಬಿಡುಗಡೆಗೊಳಿಸಿದ್ದಾರೆ.
ಘಟನೆ ವಿವರ
ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಕಛೇರಿ ನಡಾವಳಿ ಸಂಖ್ಯೆ 24/2007-08ರಂತೆ 01/12/2007 ರಿಂದ 28/02/2015 ರವರೆಗೆ ಬಾಕಿ ತೆರಿಗೆ ರೂ. 99,069/- ರೂ.ಗಳನ್ನು ಪಾವತಿಸುವಂತೆ ವಾಹನ ಮಾಲಕರಾದ ಹೆಚ್. ಮಧುಕರ್ ಆಚಾರ್ ರವರಿಗೆ ದಿನಾಂಕ 22/11/2014 ರಂದು ತೆರಿಗೆ ತಗಾದೆ ನೋಟೀಸನ್ನು ನೀಡಿದ್ದು, ಸದ್ರಿ ನೋಟೀಸನ್ನು ಅವರು ಸ್ವೀಕರಿಸಿರುತ್ತಾರೆ.
ಸದ್ರಿ ನೋಟೀಸನ್ನು ಸ್ವೀಕರಿಸಿದ ನಂತರ 30 ದಿನಗಳೊಳಗೆ ಸಂಬಂಧಪಟ್ಟ ಮೇಲ್ಮನವಿ ಪ್ರಾಧಿಕಾರಕ್ಕೆ ಅಂದರೆ ಜಂಟಿ ಸಾರಿಗೆ ಆಯುಕ್ತರು ಶಿವಮೊಗ್ಗ ಇವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು, ಸದ್ರಿ ಪ್ರಕರಣದಲ್ಲಿ ಮಧುಕರ್ ಯಾವುದೇ ಮೇಲ್ಮನವಿಯನ್ನು ಸಲ್ಲಿಸಿಲ್ಲ ಎಂದು ಆರೋಪಿಸಿ ಹಾಗೂ ಸದ್ರಿ ತೆರಿಗೆ ವಸೂಲಾತಿಯನ್ನು ಕೋರಿ ಅಂದಿನ ಸಾರಿಗೆ ಆಯುಕ್ತರಾದ ಆನಂದ ಗೌಡ ರವರು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿರುತ್ತಾರೆ.
01/12/2007 ರಿಂದ ತನ್ನ ವಾಹನವನ್ನು ನಿರುಪಯೋಗದಲ್ಲಿಡುವುದಾಗಿ ವಾಹನದ ಮಾಲಕರಾದ ಮಧುಕರ್ 01/12/2007 ರಂದು ನಮೂನೆ-30 ಅರ್ಜಿ ಸಲ್ಲಿಸಿ ವಾಹನಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಆದ್ಯಾರ್ಪಣಗೊಳಿಸಿದ್ದು, ಸದರಿ ವಾಹನವನ್ನು ಮೋಟಾರ್ ವರ್ಕ್ಸ್ ನಲ್ಲಿ ನಿರುಪಯೋಗದಲ್ಲಿ ಇಡಲಾಗಿದೆ ಎಂದು ಅರ್ಜಿಯಲ್ಲಿ ಹೇಳಿಕೊಂಡಿದ್ದು, ಆ ಸಮಯದಲ್ಲಿ 17/12/2012ರಂದು ಪ್ರಾದೇಶಿಕ ಕಛೇರಿ ಮಂಗಳೂರು ಇವರು ಸಲ್ಲಿಸಿದ ವರದಿಯಲ್ಲಿ ವಾಹನ ಮೋಟಾರ್ ವರ್ಕ್ಸ್ ಇಲ್ಲ ಎಂದು ಸಲ್ಲಿಸಿದ್ದು, ಅದರಂತೇ ಷರತ್ತು ಉಲ್ಲಂಘನೆ ಮಾಡಲಾಗಿದೆ ಎಂಬಿತ್ಯಾದಿಯಾಗಿ ಆರೋಪಿಸಲಾಗಿತ್ತು.
ಈ ಪ್ರಕರಣವನ್ನು ತನಿಖೆ ಕೈಗೆತ್ತಿಕೊಂಡ ನ್ಯಾಯಾಲಯವು ಅಭಿಯೋಜನ ಪರ ಸಾಕ್ಷ್ಯ ವಿಚಾರಣೆಯನ್ನು ಮಾಡಿ ಸುಮಾರು 3 ದಾಖಲೆಗಳನ್ನು ಮತ್ತು ಆರೋಪಿಯ ಪರ 5 ದಾಖಲೆಯನ್ನು ಗುರುತಿಸಿರುತ್ತಾರೆ. ನಂತರ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯದ ನ್ಯಾಯಾಧೀಶರಾದ ಶಿವಣ್ಣ ಹೆಚ್ ಆರ್. ರವರು ಸದ್ರಿ ಪ್ರಕರಣದಲ್ಲಿ ಆರೋಪಿಯು ವಾಹನವನ್ನು ಕಾನೂನುಬದ್ದವಾಗಿ ಆದ್ಯಾರ್ಪಣೆಗೊಳಿಸಿದ್ದು, ಸದ್ರಿ ವಾಹನವು ಆರೋಪಿಯ ಸ್ವಾಧೀನದಲ್ಲಿಯೇ ಇರಲಿಲ್ಲ ಎಂಬಿತ್ಯಾದಿ ಅಂಶಗಳನ್ನು ಪೂರಕವಾದ ಸಾಕ್ಷ್ಯಧಾರಗಳ ಹಿನ್ನಲೆಯಲ್ಲಿ ಪರಿಗಣಿಸಿ, ಪ್ರೋಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಸಾಭೀತುಪಡಿಸಲು ವಿಫಲಗೊಂಡಿದೆ ಎಂದೂ ತೀರ್ಮಾನಿಸಿ, ಆರೋಪಿಯನ್ನು ನಿರಪರಾಧಿಯೆಂದು ಖುಲಾಸೆಗೊಳಿಸಿದೆ.
ಆರೋಪಿಯ ಪರ ವಕೀಲರಾದ ಮಹೇಶ್ ಕಜೆ ವಾದಿಸಿದ್ದರು.


























