ಮಂಗಳೂರು : ಕಾಂಗ್ರೆಸ್ ಸರಕಾರ ಹಿಂದಿನ ವಿಧಾನಸಭಾ ಚುನಾವಣೆಯ ಗುಂಗಿನಿಂದಲೇ ಹೊರಬಂದಿಲ್ಲ. ರಾಷ್ಟ್ರೀಯ ಚಿಂತನೆ ಇಲ್ಲದ, ಜಾತಿ ಮತಗಳ ಸಂಕುಚಿತ ಮನಸ್ಥಿತಿಯಿಂದ ಮೇಲೇಳದ ಕಾಂಗ್ರೆಸ್ ಪದೇ ಪದೇ ಮುಗ್ಗರಿಸುತ್ತಿದೆ. ರಾಷ್ಟ್ರೀಯ ಚುನಾವಣೆಯ ರೀತಿಯಲ್ಲಿ ಎದುರಿಸಲು ಸಿದ್ಧವಾಗಿಯೇ ಇಲ್ಲ. ಸಿದ್ಧರಾಮಯ್ಯ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೇ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎಂದು ಮಂಗಳೂರು ಉತ್ತರದ ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಎಸ್.ಡಿ.ಪಿ.ಐ ಜೊತೆ ಸೇರಿ ಚುನಾವಣೆ ನಡೆಸುತ್ತಿದೆ. ಪಿ.ಎಫ್.ಐ ಅಂಗಸಂಸ್ಥೆ ಎಸ್.ಡಿ.ಪಿ.ಐ ಅಭ್ಯರ್ಥಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಕಾಂಗ್ರೆಸ್ ಗೆ ಯಾವ ಹೀನಾಯ ಸ್ಥಿತಿ ಬಂದಿದೆ ಎಂಬುದು ಈ ಮೂಲಕ ಗೊತ್ತಾಗಿದೆ. ರಾಜ್ಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಹೇಳಿದರು.
ಸರ್ಕಾರ ಜಾತಿ ಮತ ಧರ್ಮ ಒಡೆದು ಚುನಾವಣೆ ಲಾಭ ಪಡೆಯುವ ಪ್ರಯತ್ನ ಮಾಡುತ್ತಿದೆ. ಯಾವುದೇ ಯೋಜನೆಗಳು ಸಹ ಇಲ್ಲ. ಒಂದು ವರ್ಷದಲ್ಲಿ ಒಂದು ದಶಕದಷ್ಟು ರಾಜ್ಯ ಹಿಂದಕ್ಕೆ ಹೋಗಿದೆ. ಒಂದೇ ಒಂದು ನೂತನ ಯೋಜನೆಗಳ ಗುದ್ದಲಿ ಪೂಜೆಯನ್ನು ಶಾಸಕರು ಮಾಡಿಲ್ಲ., ಗ್ಯಾರಂಟಿ ಸ್ಕೀಮ್ ಗಳ ಅನುಷ್ಠಾನ ಗೊತ್ತು ಗುರಿ ಇಲ್ಲದ ರೀತಿ ನಡೆಯುತ್ತಿದೆ. ಶ್ವೇತಪತ್ರ ಹೊರಡಿಸುವ ದೈರ್ಯವೂ ಸರ್ಕಾರಕ್ಕೆ ಇಲ್ಲ ಎಂದರು.
ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ನಡೆಯನ್ನು ಗಮನಿಸಿದರೆ, ಚುನಾವಣೆ ಎದುರಿಸುವ ಶಕ್ತಿ ಇಲ್ಲದ ಇವರು ನಿಷೇಧಿತ ಪಿಎಫ್‌ಐನ ಅಂಗವಾದ ಎಸ್‌ಡಿಪಿಐ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಕುಕ್ಕರ್ ಬಾಂಬ್ ಸ್ಫೋಟಿಸಿದವ, ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದವರು ಎಸ್‌ಪಿಡಿಐಗೆ ಸೇರಿದವರು. ಅಂತಹ ಸಂಘಟನೆಯ ಜತೆಗೆ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಭರತ್ ಶೆಟ್ಟಿ ಆರೋಪಿಸಿದರು.
ಸಾಲದ ಹೊರೆ ಜಾಸ್ತಿಯಾಗುತ್ತಿದೆ. ಕಾಂಗ್ರೆಸ್ ಈ ಬಾರಿ ಯಾವುದೇ ಖಾತೆ ತೆರೆಯಲ್ಲ., ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬ್ರಿಜೇಶ್ ಚೌಟ ಮೂರು ಲಕ್ಷ ಅಂತರದಲ್ಲಿ ಗೆಲ್ಲುತ್ತಾರೆ ಎಂದರು.
ಈ ಬಾರಿ ವಿಭಿನ್ನವಾಗಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆಯಲಿದೆ. ದೊಡ್ಡದಾದ ರೋಡ್ ಶೋ ನಡೆಯುತ್ತೆ. ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ರೋಡ್ ಶೋ ಆರಂಭವಾಗಲಿದೆ. ನವಭಾರತ್ ಸರ್ಕಲ್ ವರೆಗೆ ಎಸ್.ಪಿ.ಜಿಯವರು ರೋಡ್ ಶೋಗೆ ಒಪ್ಪಿಗೆ ನೀಡಿದ್ದಾರೆ. ಮುಂದೆ ರೋಡ್ ಶೋ ವಿಸ್ತರಿಸುವ ಬಗ್ಗೆ ಇನ್ನಷ್ಟೇ ಖಚಿತಪಡಿಸಬೇಕಾಗಿದೆ. ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ಆಯೋಜನೆ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯ ನಾಯಕರಾದ ವಿಕಾಸ್ ಕುಮಾರ್ ಪುತ್ತೂರು, ಮಹಾನಗರಪಾಲಿಕೆ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್, ವರುಣ್ ಚೌಟ, ಲೋಹಿತ್ ಅಮೀನ್, ಬಂಟ್ವಾಳ ಚುನಾವಣಾ ಪ್ರಭಾರಿ ಜಗದೀಶ್ ಶೇಣವ, ಜಿಲ್ಲಾ ಮಾಧ್ಯಮ ಸಂಚಾಲಕ ವಸಂತ ಜೆ. ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


























