ಪುತ್ತೂರು : ಲೋಕಸಭಾ ಚುನಾವಣೆ ಕರ್ತವ್ಯ ಹಿನ್ನೆಲೆ ಮನೆ ಮನೆಗೆ ಮತ ಚೀಟಿ ವಿತರಣೆಗೆ ತೆರಳಿದ ರೋಟರಿಪುರ ಅಂಗನವಾಡಿ ಕಾರ್ಯಕರ್ತೆಗೆ ಫಾತಿಮಾ ಎಂಬ ಮಹಿಳೆಯೊಬ್ಬರು ಹಲ್ಲೆ ನಡೆಸಿದ ಬಗ್ಗೆ ವರದಿಯಾಗಿದೆ.
ಲೋಕಸಭಾ ಚುನಾವಣೆಯ ಹಿನ್ನೆಲೆ ಮನೆಮನೆಗೆ ಮತ ಚೀಟಿ ವಿತರಣೆಗೆ ಚುನಾವಣಾಧಿಕಾರಿಯವರ ಸೂಚನೆಯಂತೆ ಅಂಗನವಾಡಿ ಕಾರ್ಯಕರ್ತೆಯರು ತೆರಳುವ ಕಾರ್ಯ ಎ.16 ರಿಂದ ಆರಂಭಗೊಂಡಿದೆ.
ರೋಟರಿಪುರ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮತ ಚೀಟಿ ವಿತರಣೆಗೆ ಮತದಾರರ ಮನೆಯೊಂದಕ್ಕೆ ಹೋಗುತ್ತಿದ್ದ ವೇಳೆ ಇನ್ನೊಂದು ಮನೆಯಿಂದ ಹೊರ ಬಂದ ಮಹಿಳೆ ಅಂಗನವಾಡಿ ಕಾರ್ಯಕರ್ತೆಯೊಂದಿಗೆ ಮಾತನಾಡುತ್ತಿದ್ದ ವೇಳೆ ಆಕೆಯ ಮಗಳಾದ ಫಾತಿಮಾ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹಲ್ಲೆಯಿಂದ ಗಾಯಗೊಂಡ ಅಂಗನವಾಡಿ ಕಾರ್ಯಕರ್ತೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.
ಅಂಗನವಾಡಿ ಕಾರ್ಯಕರ್ತೆಯರ ಸಂಘ ಖಂಡನೆ :
ಘಟನೆಯನ್ನು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷರಾದ ಕಮಲ ಅವರು ಖಂಡಿಸಿದ್ದಾರೆ.
ಇಂದಿನಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮನೆ-ಮನೆಗೆ ತೆರಳಿ ಮತ ಚೀಟಿ ವಿತರಣೆ ಕಾರ್ಯ ಆರಂಭವಾಗಿದ್ದು, ನಮ್ಮ ಕಾರ್ಯಕರ್ತೆ ರೋಟರಿಪುರ ಭಾಗಕ್ಕೆ ಮನೆಗಳಿಗೆ ಮತ ಚೀಟಿ ವಿತರಣೆಗೆ ತೆರಳಿದ ವೇಳೆ ಸ್ಥಳೀಯ ನಿವಾಸಿ ಫಾತಿಮಾ ಎಂಬ ಮಹಿಳೆ ಕಾರ್ಯಕರ್ತೆಗೆ ಹಲ್ಲೆ ನಡೆಸಿದ್ದು, ಈ ಘಟನೆಯನ್ನು ಅಂಗನವಾಡಿ ಕಾರ್ಯಕರ್ತೆಯರ ಸಂಘವು ಖಂಡಿಸುತ್ತಿದೆ. ಇಂತಹ ಘಟನೆಯಿಂದಾಗಿ ಇತರ ಬಿಎಲ್ಒ ಗಳು ಭಯಬೀತರಾಗಿದ್ದು, ಮನೆ-ಮನೆಗೆ ಮತ ಚೀಟಿ ನೀಡಲು ಕಾರ್ಯಕರ್ತೆಯರು ಒಬ್ಬೊಬ್ಬರೆ ತೆರಳಬೇಕಾಗಿದ್ದು, ಇದು ಬಹಳ ಕಷ್ಟಕರವಾದ ಕಾರ್ಯವಾಗಿದೆ. ಈ ವೇಳೆ ಯಾವುದೇ ರಕ್ಷಣೆಗಳು ಇರುವುದಿಲ್ಲ. ಈಗಾಗಿ ಅಂಗನವಾಡಿ ಕೇಂದ್ರದಲ್ಲೇ ಕುಳಿತು ಈ ಮತದಾರರ ಚೀಟಿಯನ್ನು ನೀಡಲು ಅವಕಾಶ ಕಲ್ಪಿಸಬೇಕು ಎಂದರು.
ಈ ಬಗ್ಗೆ ಸಹಾಯಕ ಆಯುಕ್ತರಿಗೆ ಮನವಿಯನ್ನು ನೀಡಲಿದ್ದೇವೆ. ಈ ಕುರಿತು ಸೂಕ್ತ ಕ್ರಮ ಜರುಗಿಸಬೇಕು ಎಂದು ಹೇಳಿದರು.