ಆಂಧ್ರ ಪ್ರದೇಶ : ಒಂದು ಹೆಣ್ಣಿಗೆ ಮದುವೆ ಅನ್ನೋದು ಬಹಳ ಮುಖ್ಯ. ತವರು ಮನೆಯಿಂದ ಗಂಡನ ಮನೆಗೆ ಹೋಗುವಾಗ ಬಹಳಷ್ಟು ಸಂತೋಷದಿಂದ ಹೋಗಲು ಬಯಸುತ್ತಾಳೆ. ಸಂಬಂಧಿಕರು, ಸ್ನೇಹಿತರ ಆಶೀರ್ವಾದ, ಶುಭಾಶಯ ಮದುವೆ ಸಂಭ್ರಮಕ್ಕೆ ತೋರಣವಾಗಿರುತ್ತೆ. ಆದರೆ ಮದುವೆ ನಡೆಯುತ್ತಿರುವಾಗಲೇ ನವವಧುವಿನ ಮೇಲೆ ದಬ್ಬಾಳಿಕೆ ನಡೆದು ಕಿಡ್ನ್ಯಾಪ್ ಮಾಡಲು ಯತ್ನಿಸಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ರಾಜಮಂಡ್ರಿಯ ಕಿಡಿಯಂ ಬಳಿ ಯುವಕರ ಗುಂಪು ಮದುವೆ ಮನೆಗೆ ನುಗ್ಗಿ ವಧುವಿನ ಕಿಡ್ನ್ಯಾಪ್ಗೆ ಯತ್ನಿಸಿದೆ. ಮದುವೆಗೆ ರೆಡಿಯಾಗಿದ್ದ ನವವಧುವನ್ನ ಧರಧರನೇ ಎಳೆದುಕೊಂಡು ಹೋಗುತ್ತಿರುವ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮದುವೆ ನಡೆಯುತ್ತಿರುವ ಸಂದರ್ಭದಲ್ಲೇ ಒಂದು ಗುಂಪು ಮದುವೆ ಮಂಟಪಕ್ಕೆ ನುಗ್ಗಿದೆ. ಕಣ್ಣಿಗೆ ಖಾರದ ಪುಡಿ ಹಾಕಿ ಮದುವೆ ಹೆಣ್ಣಿನ ಕಿಡ್ನ್ಯಾಪ್ ಮಾಡಲು ಯತ್ನಿಸಲಾಗಿದೆ. ಆದರೆ ಮದುವೆ ಹೆಣ್ಣನ್ನು ಗಟ್ಟಿಯಾಗಿ ಹಿಡಿದುಕೊಂಡು ಅಪಹರಣ ಮಾಡುವವರನ್ನು ತಡೆಯಲಾಗಿದೆ. ದುಷ್ಕರ್ಮಿಗಳ ಅಟ್ಟಹಾಸದ ದೃಶ್ಯವನ್ನ ಮದುವೆ ಮನೆಯಲ್ಲಿದ್ದ ಕೆಲವರು ಸೆರೆ ಹಿಡಿದಿದ್ದಾರೆ. ಸದ್ಯ ದುರುಳರು ಯುವತಿಯ ಮೇಲೆ ಅತ್ಯಂತ ಅಮಾನುಷವಾಗಿ ವರ್ತಿಸಿರೋ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

























