ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಬಂಡಾಯಗಾರರಿಗೆ ಬಿಜೆಪಿ ಪಕ್ಷ ಬಿಸಿ ಮುಟ್ಟಿಸಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್ ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ತನ್ನ ಮಗನಿಗೆ ಟಿಕೆಟ್ ಸಿಗದಿದ್ದಕ್ಕೆ ಈಶ್ವರಪ್ಪ ಅವರು ಪಕ್ಷದ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದರು. ರಾಜ್ಯ ಬಿಜೆಪಿ ನಾಯಕರ ಮನವೊಲಿಕೆಗೆ ಸೊಪ್ಪು ಹಾಕದ ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ ಆಗಿತ್ತು.
ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಇಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನಾಮಪತ್ರ ವಾಪಸ್ ಪಡೆಯಲಿಲ್ಲ. ಇದರಿಂದ ಬಿಜೆಪಿ ಪಕ್ಷದ ಶಿಸ್ತು ಉಲ್ಲಂಘನೆ ಆಗಿದೆ. ಹೀಗಾಗಿ ಪಕ್ಷದ ಶಿಸ್ತು ಸಮಿತಿಯಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ರಾಘವೇಂದ್ರ ಅವರು ಸ್ಪರ್ಧಿಸಿದ್ದಾರೆ. ಹಿಂದುತ್ವ ಮತ್ತು ಬಿಎಸ್‌ವೈ ಕುಟುಂಬ ರಾಜಕಾರಣದ ವಿರುದ್ಧ ತನ್ನ ಹೋರಾಟ ಎಂದಿದ್ದ ಈಶ್ವರಪ್ಪನವರು ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
ಅಂತಿಮವಾಗಿ ಲೋಕಸಭಾ ಚುನಾವಣಾ ಕಣದಲ್ಲಿ ಸದ್ಯ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಜೊತೆಗೆ ಕೆ.ಎಸ್ ಈಶ್ವರಪ್ಪ ವಿರುದ್ಧ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ಜಿದ್ದಾಜಿದ್ದಿನ ಹೋರಾಟ ನಡೆಸಬೇಕಾಗಿದೆ. ಮೇ 7ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಬಹಿರಂಗವಾಗಲಿದೆ.



























