ಕೇಕ್ ಎಂದರೆ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ. ದಿನಕ್ಕೆ ಒಂದು ಬಾರಿಯಾದರೂ ಕೇಕ್ ತಿನ್ನೋ ಜನ ಕೂಡ ಇದ್ದಾರೆ. ಆದರೆ ಇತ್ತೀಚೆಗಷ್ಟೇ ಹುಟ್ಟುಹಬ್ಬದ ದಿನವೇ ಕೇಕ್ ತಿಂದು ಪಂಜಾಬ್ನ 10 ವರ್ಷದ ಬಾಲಕಿ ಮಾನ್ವಿ ಸಾವನ್ನಪ್ಪಿದ್ದು, ದೊಡ್ಡ ಸುದ್ದಿಯಾಗಿತ್ತು. ಈ ದುರಂತದ ಬಳಿಕ ಸಾಕಷ್ಟು ಜನರು ಕೇಕ್ ತಿನ್ನುವುದನ್ನೇ ಬಿಟ್ಟಿದ್ದಾರೆ ಎಂಬ ವಿಚಾರ ಕೂಡ ಬೆಳಕಿಗೆ ಬಂದಿದೆ.
ಇದೀಗ ಕುಟುಂಬಸ್ಥರು ಆನ್ಲೈನ್ನಲ್ಲಿ ತರಿಸಿದ್ದ ಕೇಕ್ ತಿಂದು ಮೃತಪಟ್ಟ ಬಾಲಕಿಯ ಮರೋಣೋತ್ತರ ಪರೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಹೌದು, ಬಾಲಕಿ ಮೃತಪಟ್ಟ ಬಳಿಕ ಕೇಕ್ ಅನ್ನು ಸಂಗ್ರಹಿಸಿದ ಆರೋಗ್ಯ ಅಧಿಕಾರಿಗಳು ಪರೀಕ್ಷೆಗೆ ಕಳುಹಿಸಿದ್ದರು. ಇದೀಗ ಅದೇ ಕೇಕ್ನಲ್ಲಿ ಹೆಚ್ಚಿನ ಪ್ರಮಾಣದ ಸಿಹಿ ರುಚಿಯ ಸಿಂಥೆಟಿಕ್ ಅನ್ನು ಬಳಸಲಾಗಿದೆ. ಹೀಗಾಗಿ ಅತಿಯಾಗಿ ಕೇಕ್ ತಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.
ಆರೋಗ್ಯ ಅಧಿಕಾರಿ, ಡಿಎಚ್ಒ ಡಾ ವಿಜಯ್ ಜಿಂದಾಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಸ್ಯಾಕ್ರರಿನ್ ಅನ್ನು ಆಹಾರ ಮತ್ತು ಪಾನೀಯಗಳಲ್ಲಿ ಬಳಸಿದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಲು ಕಾರಣವಾಗಬಹುದು. ಹೀಗಾಗಿ ಸಾವುಗಳು ಕೂಡ ಸಂಭವಿಸಬಹುದು ಎಂದು ತಿಳಿಸಿದ್ದಾರೆ. ಇನ್ನು, ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯ ಹುಟ್ಟುಹಬ್ಬದ ವೀಡಿಯೋ ವೈರಲ್ ಆಗಿತ್ತು. ಈ ವೀಡಿಯೋ ವೈರಲ್ ಆಗಿ ಬಾಲಕಿ ಕೇಕ್ ತಿಂದು ಮೃತಪಟ್ಟಿದ್ದಾಳೆ ಎಂಬ ವಿಚಾರ ತಿಳಿಯುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದರು.
ಇನ್ನು ಆ ವೀಡಿಯೋದಲ್ಲಿ ಬಾಲಕಿ ಸಾಯುವ ಕೆಲವೇ ಗಂಟೆಗಳ ಮೊದಲು ತನ್ನ ಕುಟುಂಬದೊಂದಿಗೆ ನಗು ನಗುತ್ತ ಕೇಕ್ ಕತ್ತರಿಸಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಳು. ಇದಾದ ಬಳಿಕ ಕೆಲ ನಿಮಿಷಗಳ ನಂತರ ಮೃತ ಮಾನ್ವಿಯ ತಂಗಿ ಸೇರಿದಂತೆ ಇಡೀ ಕುಟುಂಬಸ್ಥರು ವಾಂತಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ದುರಂತ ಎಂದರೇ ಪ್ರೀತಿಯ ಮಗಳ ಹುಟ್ಟು ಹಬ್ಬದ ದಿನವೇ ಬಾಲಕಿ ಅಂತ್ಯ ಕಂಡಿದ್ದಾಳೆ.

























