ರಾಯಲ್ ಮಲೇಷ್ಯಾ ನೇವಿಯ ಎರಡು ಹೆಲಿಕಾಪ್ಟರ್ಗಳು ಆಗಸದಲ್ಲಿ ಡಿಕ್ಕಿಯಾದ ಪರಿಣಾಮ ಒಳಗಿದ್ದ 10 ಸಿಬ್ಬಂದಿ ಸಾವನ್ನಪ್ಪಿದ್ದಾರೆ. 2 ಹೆಲಿಕಾಪ್ಟರ್ಗಳು ಡಿಕ್ಕಿಯಾಗುತ್ತಿರುವ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕೆಲವೇ ಕ್ಷಣದಲ್ಲಿ ನೆಲಕ್ಕೆ ಬಿದ್ದ ಕಾಪ್ಟರ್ಸ್ ಸಂಪೂರ್ಣವಾಗಿ ಸುಟ್ಟು ಹೋಗಿವೆ ಎಂದು ಹೇಳಲಾಗಿದೆ.
ಮಲೇಷ್ಯಾದ ಲುಮುಟ್ ಪಟ್ಟಣದ ನೌಕಾ ನೆಲೆಯಲ್ಲಿ ಹೆಲಿಕಾಪ್ಟರ್ಗಳು ಅಭ್ಯಾಸ ನಡೆಸುತ್ತಿರುವ ವೇಳೆ ಈ ಅವಘಡ ಸಂಭವಿಸಿದೆ.
ಪರಿಣಾಮ ಎರಡು ಹೆಲಿಕಾಪ್ಟರ್ನಲ್ಲಿದ್ದ 10 ಸಿಬ್ಬಂದಿ ಆಗಸದಲ್ಲೇ ಉಸಿರು ಚೆಲ್ಲಿದ್ದಾರೆ. ಒಂದು ಹೆಲಿಕಾಪ್ಟರ್ನಲ್ಲಿ 7 ಮಂದಿ, ಇನ್ನೊಂದು ಹೆಲಿಕಾಪ್ಟರ್ನಲ್ಲಿ ಮೂವರು ಮೃತಪಟ್ಟಿದ್ದಾರೆ. ಮಲೇಷ್ಯಾದ ಉತ್ತರ ಪೆರಾಕ್ ನೌಕಾ ನೆಲೆಯಲ್ಲಿ ನಡೆಯಲಿರುವ ರಾಯಲ್ ಮಲೇಷ್ಯಾ ನೇವಿಯ 90ನೇ ವಾರ್ಷಿಕೋತ್ಸವದ ಆಚರಣೆಯ ಪೂರ್ವಾಭ್ಯಾಸದ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ ಎಂದು ಅಲ್ಲಿನ ನೌಕಾಪಡೆ ವರದಿ ಮಾಡಿದೆ.
ಮೈದಾನಕ್ಕೆ ಒಂದು ಹೆಲಿಕಾಪ್ಟರ್ ಬಿದ್ದಿದ್ದರೇ ಇನ್ನೊಂದು ನೀರಿಗೆ ಬಿದ್ದಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ರಕ್ಷಣಾ ಪಡೆ ತೆರಳಿದ್ದು ನೆಲದ ಬಿದ್ದಿರುವ ಅವಶೇಷಗಳನ್ನು ಸಂಗ್ರಹ ಮಾಡಲಾಗಿದೆ. ಈ ಅವಶೇಷಗಳನ್ನು ಆಸ್ಪತ್ರೆಗೆ ಕಳುಹಿಸುವ ಮೂಲಕ ಪರೀಕ್ಷೆ ನಂತರ ಘಟನೆಯಲ್ಲಿ ಯಾರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬರಲಿದೆ.

























