ಬೆಂಗಳೂರು : ರಾಜ್ಯದಲ್ಲಿ ಬಿಸಿಲಿನ ತಾಪಮಾನ ಮುಂದುವರಿದಿದ್ದು, ಬೆಂಗಳೂರು, ಬೀದರ್ ಸಹಿತ 19 ಜಿಲ್ಲೆಗಳಿಗೆ ಮೇ 3ರಂದು ಬಿಸಿ ಗಾಳಿ ಮುನ್ಸೂಚನೆ ನೀಡಲಾಗಿದೆ.
ಬೀದರ್, ಬೆಳಗಾವಿ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಬಳ್ಳಾರಿ, ಬೆಂಗಳೂರು ನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ಮೇ 5ರ ವರೆಗೆ ಬಿಸಿ ಗಾಳಿ ಬೀಸುವ ಸಾಧ್ಯತೆಯಿದೆ. ಈ ಜಿಲ್ಲೆಗಳಲ್ಲಿ ಜನಸಾಮಾನ್ಯರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ರಾಜ್ಯದ ವಿವಿಧೆಡೆ ಗುರುವಾರ ಮಳೆಯಾಗಿದ್ದು, ಜೂನ್ ಮೊದಲ ವಾರದ ಬಳಿಕವೇ ಹೆಚ್ಚಿನ ಮಳೆ ನಿರೀಕ್ಷಿಸಬಹುದಾಗಿದೆ. ಅಲ್ಲಿವರೆಗೆ ತುಂತುರು ಮಳೆಯಷ್ಟೆ ಬೀಳಲಿದೆ.
ಮೇ 5ರಂದು ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಕೆಲವೆಡೆ ಲಘು ಮಳೆಯಾಗುವ ಸಾಧ್ಯತೆ ಇದೆ.
ಮೇ 7ರಂದು ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸಹಿತ ಕೆಲವು ಜಿಲ್ಲೆಗಳಲ್ಲಿ ಮುಂದಿನ 4 ದಿನಗಳವರೆಗೆ ಹಗುರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ತಜ್ಞ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.


























