ಮುಂಬೈ : ಹೆರಿಗೆ ಸಮಯದಲ್ಲಿ ತಾಯಿ ಮತ್ತು ಮಗು ಸಾವನ್ನಪ್ಪಿದ ಅಹಿತಕರ ಘಟನೆ ಮುಂಬೈನ ಭಾಂಡೂಪ್ ಮುನ್ಸಿಪಲ್ ಹೆರಿಗೆ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.
ಸುಷ್ಮಾ ಸ್ವರಾಜ್ ಹೆರಿಗೆ ಆಸ್ಪತ್ರೆಯಲ್ಲಿ ಸೌಲಭ್ಯಗಳಿಲ್ಲದೆ ಮಗು ಸಾವನ್ನಪ್ಪಿದೆ ಎಂದು ಮೃತ ಮಹಿಳೆಯ ಕುಟುಂಬ ಆರೋಪಿಸಿದೆ. ವಿದ್ಯುತ್ ಇಲ್ಲದೆ ಹೆರಿಗೆ ಮಾಡಿಸಲು ವೈದ್ಯರು ಮುಂದಾಗಿದ್ದಾರೆ ಎಂದು ಮನೆಯವರು ದೂರಿದ್ದಾರೆ. ಸದ್ಯ ಬೃಹಾನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ತಾಯಿ-ಮಗುವಿನ ಸಾವಿನ ಪ್ರಕರಣವನ್ನು ತನಿಖೆ ಮಾಡುತ್ತಿದೆ.
ಸಾವನ್ನಪ್ಪಿದ ಗರ್ಭಿಣಿ ಮಹಿಳೆಯನ್ನು ಸಹೀದುನ್ ಅನ್ಸಾರಿ (26) ಎಂದು ಗುರುತಿಸಲಾಗಿದ್ದು, ಭಾಂಡೂಪ್ ನಿವಾಸಿಯಾಗಿದ್ದಾರೆ. ಇವರು ಹನುಮಾನ್ ನಗರದಲ್ಲಿರುವ ಸುಷ್ಮಾ ಸ್ವರಾಜ್ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಈಕೆಯ ಕುಟುಂಬವಂತೂ ಸಹೀದುನ್ನಿಂದ ಮೊದಲ ಮಗುವಿನ ನೀರಿಕ್ಷೆಯಲ್ಲಿತ್ತು.
ಏಪ್ರಿಲ್ 29ರಂದು ಸಹೀದುನ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಏಪ್ರಿಲ್ 30ರಂದು 12:30ಕ್ಕೆ ಹೆರಿಗೆಯಾಗಿದೆ. ಆದರೆ ಹೆರಿಗೆಯಾದ ಕೆಲ ಹೊತ್ತಿನಲ್ಲೇ ಮಗು ಸಾವನ್ನಪ್ಪಿದೆ. ಬಳಿಕ ತಾಯಿಯ ಆರೋಗ್ಯದಲ್ಲೂ ಏರುಪೇರು ಕಾಣಿಸಿಕೊಂಡಿದ್ದು, ಸಹೀದುನ್ನನ್ನು ಎಲ್ಟಿಎಂಜಿ ಸಿಯಾನ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಆದರೆ ಅಲ್ಲಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ.
ಟಾರ್ಚ್ ಹಿಡಿದು ಕೆಲಸ ಮಾಡ್ತಾರೆ
ಸಹೀದುನ್ ಸೋದರ ಮಾವ ಶಾರುಖ್ ಅನ್ಸಾರಿ ‘ಇಲ್ಲಿ ದಿನನಿತ್ಯ ಹೆರಿಗೆ ಪ್ರಕ್ರಿಯೆ ನಡೆಯುತ್ತದೆ. ಅದರಂತೆ ಸಹೀದುನ್ ಹೆರಿಗೆ ನೋವು ಕಾಣಿಸಿದಾಗ ಮಗುವಿನ ಹೃದಯ ಬಡಿತ ಕಡಿಮೆಯಾಗಿದೆ. ಅದಕ್ಕೆ ವೈದ್ಯರು ಸಿಸೇರಿಯನ್ ಅನ್ನು ಆಯ್ಕೆ ಮಾಡುತ್ತಾರೆ. ಆದರೆ ಅಲ್ಲಿ ಬೆಳಕಿನ ಕೊರತೆ ಇದ್ದರೂ ಸಹ ನಿರ್ಲಕ್ಷ್ಯದಿಂದ ಸಿಸೇರಿಯನ್ಗೆ ಮುಂದಾಗುತ್ತಾರೆ. ಟಾರ್ಚ್ ಹಿಡಿದು ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ತೀವ್ರ ರಕ್ತಸ್ರಾವದಿಂದ ಮಹಿಳೆ ಸಾವು
ಸಹೀದುನ್ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ. 9 ತಿಂಗಳ ಗರ್ಭಿಣಿಯಾದಾಗ ಉತ್ತಮ ಆರೋಗ್ಯ ಹೊಂದಿದ್ದಳು. ಆದರೆ ಹೆರಿಗೆ ಆಸ್ಪತ್ರೆಗೆ ಕರೆ ತಂದ ಬಳಿಕ ಹೇಗೆ ಸತ್ತಳು? ಈ ಸರ್ಕಾರಿ ಆಸ್ಪತ್ರೆಯ ಯಾವ ರೀತಿ ಸೇವೆ ನೀಡುತ್ತಿದೆ? ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಮೃತ ಸಹೀದುನ್ ಸಹೋದರ ಪ್ರಶ್ನಿಸಿದ್ದಾರೆ.

























