ಬಂಟ್ವಾಳ : ಕಾಲು ಜಾರಿ ನೇತ್ರಾವತಿ ನದಿಗೆ ಬಿದ್ದ ಉಳ್ಳಾಲ ಮೂಲದ ಇಬ್ಬರು ಬಾಲಕಿಯರು ತಾಯಿ ಹಾಗೂ ಮನೆಮಂದಿಯ ಕಣ್ಣೆದುರೇ ಮುಳುಗಿ ಮೃತಪಟ್ಟ ಘಟನೆ ರವಿವಾರ ಸಂಜೆ ನಾವೂರು ಗ್ರಾಮದ ನೀರಕಟ್ಟೆಯಲ್ಲಿ ಸಂಭವಿಸಿದೆ.
ಉಳ್ಳಾಲ ಬನ್ನಿಕೊಟ್ಯ ದರ್ಗಾ ರೋಡ್ ನಿವಾಸಿ ಇಲಿಯಾಸ್ ಅವರ ಪುತ್ರಿ ಮರಿಯಮ್ ನಾಫಿಯಾ (14) ಹಾಗೂ ಕೋಣಾಜೆ ಅಸೈಗೋಳಿ ನಿವಾಸಿ ಮೊಹಮ್ಮದ್ ಅನ್ಸಾರ್ ಅವರ ಪುತ್ರಿ ಆಶುರಾ (11) ಮೃತಪಟ್ಟವರು.
ಶಾಲೆಗೆ ರಜೆಯ ಹಿನ್ನೆಲೆಯಲ್ಲಿ ಮನೆ ಮಂದಿ ನಾವೂರಿನ ಮೈಂದಾಳದಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದು, ರವಿವಾರ ಸಂಜೆ 5ರ ಸುಮಾರಿಗೆ ಮನೆ ಮಂದಿ ಎಲ್ಲರೂ ನೇತ್ರಾವತಿ ನದಿ ಕಿನಾರೆಗೆ ವಿಹಾರಕ್ಕಾಗಿ ತೆರಳಿದ್ದರು ಎನ್ನಲಾಗಿದೆ.
ಆಗ ಎಲ್ಲರೂ ನೀರಿನಲ್ಲಿ ಆಟವಾಡುತ್ತಿದ್ದು, ಇಬ್ಬರು ಬಾಲಕಿಯರು ಮುಂದೆ ಹೋಗಿ ಆಕಸ್ಮಿಕವಾಗಿ ನೀರಿನ ಆಳಕ್ಕೆ ಬಿದ್ದಿದ್ದಾರೆ. ಆದರೆ ಜೊತೆಗಿದ್ದ ಮನೆ ಮಂದಿಯಲ್ಲಿ ಯಾರಿಗೂ ಈಜಲು ಬಾರದೆ ಅವರನ್ನು ರಕ್ಷಿಸುವುದಕ್ಕೆ ಸಾಧ್ಯವಾಗದೆ ಬೊಬ್ಬೆ ಹಾಕಿದರು. ಬಳಿಕ ಸ್ಥಳೀಯ ಯುವಕರು ಆಗಮಿಸಿ ಮಕ್ಕಳನ್ನು ಮೇಲಕ್ಕೆತ್ತಿದ್ದು, ಅದಾಗಲೇ ಇಬ್ಬರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಮೃತ ಬಾಲಕಿ ನಾಸಿಯಾ ಅವರ ತಂದೆ ಇಲಿಯಾಸ್ ಅವರು ಹಿಂದೆ ನಾವೂರಿನ ಮೈಂದಾಳದಲ್ಲೇ ನೆಲೆಸಿದ್ದು, ಕಳೆದ ಕೆಲವು ವರ್ಷಗಳಿಂದ ಅವರು ಉಳ್ಳಾಲದಲ್ಲಿ ವಾಸ್ತವ್ಯವಿದ್ದರು. ಮೃತ ಬಾಲಕಿಯರಿಬ್ಬರು ಸಂಬಂಧಿಗಳಾಗಿದ್ದು, ನಾಸಿಯಳು ಮೃತ ಆಶುರಾಳ ತಂದೆಯ ಅಕ್ಕನ ಮಗಳು.
ಮೃತದೇಹಗಳನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಉಳ್ಳಾಲದಿಂದ ಸಂಬಂಧಪಟ್ಟವರು ಆಗಮಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಸಂದರ್ಭ ಆಸ್ಪತ್ರೆಯ ಬಳಿ ಹೆಚ್ಚಿನ ಮಂದಿ ಜಮಾಯಿಸಿದ್ದರು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























