ಮಂಗಳೂರು : ದ.ಕ.ಜಿಲ್ಲೆಯಲ್ಲಿ ಈವರೆಗೆ ಕಾಣದ ಹೀಟ್ ಸ್ಟ್ರೋಕ್ ಸಮಸ್ಯೆ ಈ ಬಾರಿ ಕಾಡಲಾರಂಭಿಸಿದೆ. ನಿತ್ರಾಣ, ತಲೆಸುತ್ತು, ಕಾಲು ಬಾವು, ಸುಸ್ತು ಇಂತಹ ಲಕ್ಷಣಗಳು ಜಿಲ್ಲೆಯಲ್ಲಿ ವರದಿಯಾಗುತ್ತಿದೆ. ಆದ್ದರಿಂದ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕು ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಹೇಳಿದರು.

ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಬಿಸಿಗಾಳಿ ಹೆಚ್ಚಾದಲ್ಲಿ ಆರೋಗ್ಯದಲ್ಲಿ ಏರುಪೇರು ಆಗುತ್ತದೆ. ಚರ್ಮದಲ್ಲಿ ತುರಿಕೆ, ಬಿರುಕು ಮೂಡುತ್ತದೆ. ಸುಸ್ತು, ಅಸ್ವಸ್ಥತೆ ಆಗಬಹುದು. ಕುಸಿದು ಬೀಳುವ ಸಾಧ್ಯತೆಯೂ ಇದೆ. ಚರ್ಮದಲ್ಲಿ ಕೆಂಪು, ಗುಳ್ಳೆಗಳು ಕಾಣಿಸಿಕೊಳ್ಳಬಹುದು, ಕಾಲು-ಕೈ-ಮುಖದಲ್ಲಿ ಬಾವುಗಳು ಕಾಣಿಸಿಕೊಳ್ಳಬಹುದು, ಕಾಲು ಸೆಳೆತ, ನಿಶಕ್ತಿ ಉಂಟಾಗುವ ಸಾಧ್ಯತೆಯಿದೆ. ಚರ್ಮ ಸುಕ್ಕಾಗುವುದು, ಹಳದಿ ಬಣ್ಣಕ್ಕೆ ತಿರುಗುತ್ತದೆ. ಅತಿಯಾದ ಬಾಯಾರಿಕೆ, ದಣಿವು, ವಾಂತಿ ಕಾಣಿಸಿಕೊಳ್ಳುತ್ತದೆ ಎಂದರು.
ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡಲ್ಲಿ ಶುದ್ಧನೀರಿನಲ್ಲಿ ಸ್ನಾನ ಮಾಡುವುದು, ಔಷಧೋಪಚಾರ ಮಾಡುವುದು, ತೀವ್ರ ಬಳಲಿಕೆ ನಿತ್ರಾಣಗೊಂಡವರನ್ನು ನೆರಳಿರುವ ತಂಪು ಪ್ರದೇಶಕ್ಕೆ ಕೊಂಡೊಯ್ದು ಬಟ್ಟೆಗಳನ್ನು ಸಡಿಲಗೊಳಿಸಿ ಗಾಳಿ ಬೆಳಕು ಆಡುವಂತೆ ಮಾಡುವುದು. ಹವಾನಿಯಂತ್ರಿತ ಕೊಠಡಿಯಲ್ಲಿ ಕೊಂಚಕಾಲ ವಿಶ್ರಾಂತಿ ಮಾಡಬೇಕೆಂದರು.

























