ಮಂಗಳೂರು : ಜನರ ಜೀವ ಉಳಿಸಲು ಹಗಲಿರುಳು ದುಡಿಯುವ ಆಂಬ್ಯುಲೆನ್ಸ್ ಸಿಬ್ಬಂದಿಯ ಜೀವನಕ್ಕೆ ಗ್ಯಾರಂಟಿ ಇಲ್ಲದಿರುವುದು ದುರಂತ. ಸತತ ಮೂರು ತಿಂಗಳಿಂದ ಸಂಬಳ ನೀಡದೆ ಸತಾಯಿಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಆಡಳಿತ ಕೇವಲ ಪ್ರಚಾರಕಷ್ಟೇ ಸೀಮಿತವಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಣ್ಣ ಸಮಸ್ಯೆಯಿಂದ ಸಂಬಳ ನೀಡುವಲ್ಲಿ ವಿಳಂಬವಾಗಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡುವ ಆರೋಗ್ಯ ಸಚಿವರೇ, ಕನಿಷ್ಠ ಸಂಬಳಕ್ಕೆ ಜೀವದ ಹಂಗು ತೆರೆದು ಕೆಲಸ ಮಾಡುವ ಜೀವ ರಕ್ಷಕ ಆಂಬ್ಯುಲೆನ್ಸ್ ಸಿಬ್ಬಂದಿಗಳಿಗೆ ಕಳೆದ ಮೂರು ತಿಂಗಳಿಂದ ಸಂಬಳ ನೀಡದಿರುವುದು ಸಣ್ಣ ಸಮಸ್ಯೆ..? ನೀವು ಹೇಳುವಂತಹ ಸಣ್ಣ ಸಮಸ್ಯೆಯನ್ನು ಪರಿಹಾರ ಮಾಡಲು ಇಷ್ಟು ತಿಂಗಳಾದರೂ ಸಾಧ್ಯವಾಗದೇ ಇರುವಾಗ ನಿಮಗೆ ರಾಜ್ಯದ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹಾರ ಮಾಡಲು ಸಾಧ್ಯವಿದೆಯೇ? ಆಂಬುಲೆನ್ಸ್ ಸೇವೆಯ ವ್ಯತ್ಯಾಯದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿದರೆ ಅದರ ನೇರ ಹೊಣೆಯನ್ನು ಕಾಂಗ್ರೆಸ್ ಸರ್ಕಾರ ಹೊರಬೇಕಾಗುತ್ತದೆ.
ಆಂಬ್ಯುಲೆನ್ಸ್ ಸಿಬ್ಬಂದಿಗಳ ವೇತನವನ್ನು ಬಿಡುಗಡೆ ಮಾಡುವ ಮೂಲಕ ಮುಷ್ಕರವನ್ನು ಶೀಘ್ರವಾಗಿ ಹಿಂಪಡೆಯುವಂತೆ ನೋಡಿಕೊಳ್ಳಬೇಕೆಂದು ಮುಖ್ಯಮಂತ್ರಿಯವರಲ್ಲಿ ಆಗ್ರಹಿಸಿದ್ದಾರೆ.


























