ಮಂಜೇಶ್ವರ : ಆಂಬ್ಯುಲೆನ್ಸ್ -ಕಾರು ಅಪಘಾತ ಸಂಭವಿಸಿ ಮೂವರು ಮೃತಪಟ್ಟು ನಾಲ್ಕು ಜನರಿಗೆ ಗಾಯಗಳಾದ ಘಟನೆ ಮಂಜೇಶ್ವರ ಕುಂಜತ್ತೂರು ಬಳಿ ಸಂಭವಿಸಿದೆ.
ಮಂಜೇಶ್ವರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಅಪಘಾತ ಸಂಭವಿಸಿದ್ದು, ವಿರುದ್ದ ದಿಕ್ಕಿನಲ್ಲಿ ಬಂದ ಆಂಬ್ಯುಲೆನ್ಸ್ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಕಾರಿನಲ್ಲಿದ್ದ ತ್ರಿಶ್ಯೂರು ಗುರುವಾಯೂರು ನಿವಾಸಿಗಳಾದ ಶ್ರೀನಾಥ್, ಶರತ್ ಮೆನೋನ್ ಎಂಬವರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಆಂಬ್ಯುಲೆನ್ಸ್ ನಲ್ಲಿದ್ದ ರೋಗಿಯೂ ಗಾಯಗೊಂಡಿದ್ದಾರೆ.
ಅಪಘಾತದ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಾಸರಗೋಡು ಚಟ್ಟಂಚಾಲ್ ನಿಂದ ಅಪಘಾತಕ್ಕೀಡಾಗಿದ್ದ ಗಾಯಾಳು ಹಾಗೂ ಜೊತೆಗಿದ್ದ ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್ ಹಾಗೂ ಮಂಗಳೂರಿನಿಂದ ಕಾಸರಗೋಡು ತ್ರಿಶೂರು ಕಡೆ ಹೋಗುತ್ತಿದ್ದ ಕಾರು ನಡುವೆ ಅಪಘಾತ ನಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಆ್ಯಂಬುಲೆನ್ಸ್ ರಸ್ತೆಯಲ್ಲಿ ಮಗುಚಿ ಬಿದ್ದಿದೆ.
ಘಟನೆ ನಡೆದ ಸ್ಥಳದಲ್ಲಿ ಅಗ್ನಿಶಾಮಕದಳ, ಪೊಲೀಸರು ಮತ್ತು ಸ್ಥಳೀಯರು ಕೆಲ ಕಾಲ ಜಂಟಿ ಕಾರ್ಯಾಚರಣೆ ನಡೆಸಿ ಕಾರಿನಲ್ಲಿದ್ದವರನ್ನು ಹೊರಗೆ ತೆಗೆದಿದ್ದು, ಮೃತದೇಹಗಳನ್ನು ಮಂಗಳ್ಪಾಡಿ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.


























