ಪುತ್ತೂರು:ಆಟೋ ರಿಕ್ಷಾ, ಕ್ಯಾಬ್, ಮ್ಯಾಕ್ಸಿಕ್ಯಾಬ್ ಚಾಲಕರಿಗೆ ರಾಜ್ಯ ಸರಕಾರ ಘೋಷಣೆ ಮಾಡಿದ ಕೋವಿಡ್ ಪ್ಯಾಕೇಜ್‌ನ್ನು ಪಡೆದುಕೊಳ್ಳಲು ಸಹಕಾರವಾಗುವ ನಿಟ್ಟಿನಲ್ಲಿ ನೋಂದಣಿ ಸಪ್ತಾಹಕ್ಕೆ ಮೇ.೩೦ರಂದು ಬಿಜೆಪಿ ಪಕ್ಷದ ಕಚೇರಿಯಲ್ಲಿ ಚಾಲನೆ ನೀಡಲಾಯಿತು.
ನೋಂದಣಿ ಸಪ್ತಾಹಕ್ಕೆ ಶಾಸಕ ಸಂಜೀವ ಮಠಂದೂರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸಮಾಜದಲ್ಲಿರುವರ ಎಲ್ಲಾ ವರ್ಗದ ಜನರ ಕಷ್ಟ ಕಾರ್ಪಣ್ಯಗಳಿಗೆ ಧ್ವನಿಯಾಗಿ ಮೂಲಕ ಸೇವೆಯೆಂಬ ಯಜ್ಞ ಕುಂಡದಲ್ಲಿ ಸವಿದೆ ಉರಿಯುವಂತೆ ಪಕ್ಷದ ಕಾರ್ಯಕರ್ತರು ಬದ್ದರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ದೇಶದಲ್ಲಿ ಆರ್ಥಿಕ ಹಾಗೂ ಆರೋಗ್ಯ ಸಂಕಷ್ಟವನ್ನು ಸಮರ್ಥವಾಗಿ ನಿರ್ವಹಿಸಿ, ಜನರ ಜೀವ, ಆರೋಗ್ಯ ರಕ್ಷಣೆ ಮಾಡಿದ ಪ್ರಧಾನಿಯವರ ಕಾರ್ಯಕ್ರಮವನ್ನು ಜನ ಸಾಮಾನ್ಯರಿಗೆ ತಲುಪಿಸುವುದೇ ಸೇವಾಹಿ ಸಂಘಟನೆಯ ಉದ್ದೇಶ ಎಂದರು.
ಮುಖ್ಯ ಅತಿಥಿಯಾಗಿದ್ದ ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮಣಿ ಮಾತನಾಡಿ, ಕೋವಿಡ್‌ನ್ನು ಯಶಸ್ವಿಯಾಗಿ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡುತ್ತದೆ. ಕಾರ್ಯಕರ್ತರ ಮನೆಯಲ್ಲಿಯೇ ತೊಂದರೆಗಳನ್ನು ಎದುರಿಸುತ್ತಿದ್ದರೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರ ಸಂಘಟನೆ ಸರಕಾರದ ಜೊತೆ ಕೈ ಜೋಡಿಸಿದ್ದು ಕೋವಿಡ್ ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ವಿರೋಧ ಪಕ್ಷದವರು ಕೇವಲ ವಿರೋಧಿಸುವ ಕಾರ್ಯ ಮಾಡುತ್ತಿದ್ದು ಆಡಳಿತದಲ್ಲಿರುವ ಬಿಜೆಪಿ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ತಲಮಟ್ಟಕ್ಕೆ ಇಳಿದು ನೊಂದವರ ಸೇವೆ ಮಾಡುತ್ತಿದೆ. ಕಾರ್ಯಕರ್ತರು ಫ್ರಂಟ್‌ಲೈನ್ ವಾರಿಯರ್‍ಸ್‌ಗಿಂತಲೂ ಉತ್ತಮ ಸೇವೆ ನೀಡುತ್ತಿದ್ದಾರೆ. ದೇಶದಾದ್ಯಂತ ಸೇವಾಹಿ ಸಂಘಟನೆಯು ಸಮರ್ಥವಾಗಿ ಕಾರ್ಯ ನಡೆಯುತ್ತಿದ್ದು ಕೋವಿಡ್ ಮುಕ್ತ ಪುತ್ತೂರನ್ನು ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಲಿದೆ ಎಂದರು.
ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಗುರುದತ್ ಜಿ.ನಾಯಕ್ ಮಾತನಾಡಿ, ಸಮಾಜದಲ್ಲಿ ನೊಂದವರವ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಜೆಪಿ ಯುವ ಮೋರ್ಚಾ ಜನರ ಆರೋಗ್ಯದ ರಕ್ಷಣೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆಟೋ, ಕ್ಯಾಬ್ ಚಾಲಕರಿಗೆ ಸರಕಾರ ಘೋಷಣೆ ಮಾಡಿರುವ ಪ್ಯಾಕೇಜ್‌ನ್ನು ಯಶಸ್ವಿಯಾಗಿ ತಲುಪಿಸುವ ನಿಟ್ಟಿನಲ್ಲಿ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ನೋಂದಣಿ ಸಪ್ತಾಹವನ್ನು ಆಯೋಜಿಸಲಾಗುವುದು ಎಂದರು.
ಶಾಸಕರ ಕಚೇರಿಯಲ್ಲಿ ನೋಂದಣಿ:
ಮಿನಿ ವಿಧಾನ ಸೌಧದಲ್ಲಿರುವ ಶಾಸಕರ ಕಚೇರಿಯಲ್ಲಿ ಆಟೋ ರಿಕ್ಷಾ, ಕ್ಯಾಬ್ ಚಾಲಕರಿಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು. ಏಳು ದಿನಗಳ ಕಾಲ ನೋಂದಣಿ ನಡೆಯಲಿದ್ದು ಬೆಳಿಗ್ಗೆ ೮.೩೦ರಿಂದ ಸಂಜೆ ೫ರ ತನಕ ನೋಂದಣಿಗೆ ಅವಕಾಶವಿದೆ. ಚಾಲಕರು ತಮ್ಮ ವಾಹನದ ದಾಖಲೆ, ಡ್ರೈವಿಂಗ್ ಲೈಸನ್ಸ್, ಬ್ಯಾಜ್, ಆಧಾರ್ ಕಾರ್ಡ್ ಮೊದಲಾದ ದಾಖಲೆಯೊಂದಿಗೆ ಆಗಮಿಸಿ ನೋಂದಾಯಿಸಿಕೊಳ್ಳುವಂತೆ ಯುವ ಮೋರ್ಚಾದ ಪ್ರಕಟಣೆ ತಿಳಿಸಿದೆ.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಪೂಡಾದ ಅಧ್ಯಕ್ಷ ಬಾಮಿ ಅಶೋಕ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜ್‌ಗಣೇಶ್ ಕಾಮತ್ ಸ್ವಾಗತಿಸಿ, ಯುವ ಮೋರ್ಚಾ ನಗರ ಮಂಡಲದ ಅಧ್ಯಕ್ಷ ಸಚಿನ್ ಶೆಣೈ ವಂದಿಸಿದರು.