ಬೆಂಗಳೂರು : ಬರ್ತ್ಡೇ ಹೆಸರಿನಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದ ಅಡ್ಡದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಎಲೆಕ್ಟ್ರಾನಿಕ್ ಸಿಟಿ ಬಳಿಯ ಫಾರ್ಮ್ ಹೌಸ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ರೇವ್ ಪಾರ್ಟಿಯಲ್ಲಿ ಮಾದಕವಸ್ತು ಎಂಡಿಎಂಎ ಮತ್ತು ಕೊಕೇನ್ ಪತ್ತೆಯಾಗಿದಲ್ಲದೆ, ಆಂಧ್ರ ಹಾಗೂ ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಜನರು ಪತ್ತೆಯಾಗಿದ್ದಾರೆ. ತೆಲುಗು ಸಿನಿರಂಗದ ಕಿರುತೆರೆ ಹಾಗೂ ಸಿನಿಮಾ ನಟಿಯರು ಸೇರಿದಂತೆ 25ಕ್ಕೂ ಹೆಚ್ಚು ಯುವತಿಯರು ಕಾಣಿಸಿಕೊಂಡಿದ್ದಾರೆ.
ಸಿಸಿಬಿಯ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳಿಂದ ಈ ದಾಳಿ ನಡೆದಿದೆ. ತಡರಾತ್ರಿ ಎರಡು ಘಂಟೆ ದಾಟಿದ್ರು ಪಾರ್ಟಿ ನಡೆಯುತ್ತಿತ್ತು. ಅವಧಿ ಮೀರಿ ಪಾರ್ಟಿ ಮಾಡಿದ್ದಲ್ಲದೆ, ಪಾರ್ಟಿಯಲ್ಲಿ ಡ್ರಗ್ಸ್ ಪತ್ತೆಯಾಗಿದೆ.
ಕಾನ್ ಕಾರ್ಡ್ ಮಾಲೀಕ ಗೋಪಾಲ ರೆಡ್ಡಿ ಎಂಬುವವರ ಮಾಲೀಕತ್ವದ ಫಾರ್ಮ್ ಹೌಸ್ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಆಯೋಜಕರು ಪಾರ್ಟಿಗೆ ಆಂಧ್ರದಿಂದ ವಿಮಾನದಲ್ಲಿ ಯುವಕ ಯುವತಿಯರನ್ನು ಕರೆಸಿಕೊಂಡಿದ್ದರು ಎಂಬುದು ತಿಳಿದುಬಂದಿದೆ. ಹೈದ್ರಾಬಾದ್ ಮೂಲದ ವಾಸು ಎಂಬಾತ ಪಾರ್ಟಿ ಆಯೋಜನೆ ಮಾಡಿದ್ದ ಎಂದು ಬೆಳಕಿಗೆ ಬಂದಿದೆ.
ಒಂದು ಬೆಂಜ್ ಕಾರಿನಲ್ಲಿ ಆಂಧ್ರದ ಎಂಎಲ್ಎ ಪಾಸ್ ಪತ್ತೆಯಾಗಿದೆ. ಎಂಎಲ್ಎ ಕಾಕನಿ ಗೋವರ್ಧನ ರೆಡ್ಡಿ ಎಂಬುವವರ ಹೆಸರಿನ ಪಾಸ್ ಪತ್ತೆಯಾಗಿದೆ. ಸ್ಥಳದಲ್ಲಿ ಹದಿನೈದಕ್ಕು ಹೆಚ್ಚು ಕಾರುಗಳು ಕಾಣಿಸಿಕೊಂಡಿವೆ. ಐಶಾರಾಮಿ ಮರ್ಸಿಡಿಸ್ ಬೆಂಜ್ , ಜಾಗ್ವಾರ್, ಔಡಿ ಕಾರು ಪತ್ತೆಯಾಗಿದೆ.
ಸನ್ ಸೆಟ್ ಟು ಸನ್ ರೈಸ್ ಎಂದು ಪಾರ್ಟಿ ಆಯೋಜನೆ ಮಾಡಲಾಗಿತ್ತು. ಭಾನುವಾರ ಸಂಜೆ ಐದು ಘಂಟೆ ಯಿಂದ ಬೆಳಗ್ಗೆ ಆರು ಘಂಟೆ ತನಕ ಪಾರ್ಟಿ ನಡೆಯುತ್ತಿತ್ತು. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಒಳಭಾಗದಲ್ಲಿ ಸಿಸಿಬಿ ದಾಳಿ ಮಾಡುವ ಹಿನ್ನಲೆ ಹೊರ ವಲಯದಲ್ಲಿ ಪಾರ್ಟಿ ಆಯೋಜನೆ ಮಾಡಿದ್ದರು ಎನ್ನಲಾಗುತ್ತಿದೆ. ಒಂದು ದಿನದ ಪಾರ್ಟಿಗೆ ಮೂವತ್ತರಿಂದ ಐವತ್ತು ಲಕ್ಷ ಖರ್ಚು ಮಾಡಿ ಆಯೋಜನೆ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.
ರೇವ್ ಪಾರ್ಟಿಯಲ್ಲಿ ಡಿಜೆಗಳು, ಮಾಡೆಲ್ಗಳು ಹಾಗೂ ಟೆಕ್ಕಿಗಳು ಪತ್ತೆಯಾಗಿದ್ದಾರೆ. ಡಿಜೆಗಳಾದ RABZ, KAYVEE ಮತ್ತು BLOODY MASCARA ಗಳು ಭಾಗಿಯಾಗಿದ್ದಾರೆ. ಸದ್ಯ ನಾರ್ಕೊಟಿಕ್ಸ್ ಸ್ನಿಫರ್ ಡಾಗ್ ಗಳಿಂದ ಸ್ಥಳ ಪರಿಶೀಲನೆ ನಡೆಯುತ್ತಿದೆ. ಪೊಲೀಸರು ಪಾರ್ಟಿಯಲ್ಲಿ ಭಾಗಿಯಾದವರ ಗುರುತು ಪತ್ತೆ ಮಾಡುತ್ತಿದ್ದಾರೆ.
ಪಾರ್ಟಿಯಲ್ಲಿ ತೆಲುಗು ಸಿನಿರಂಗದ ಕಿರುತೆರೆ ಹಾಗೂ ಸಿನಿಮಾ ನಟಿಯರು ಭಾಗಿಯಾಗಿದ್ದಾರೆ. ನಟಿ ಹೇಮಾ ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಪಾರ್ಟಿಯಲ್ಲಿ ಭಾಗಿಯಾಗಿದ್ದ ಐವತ್ತಕ್ಕೂ ಹೆಚ್ಚು ಜನರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.


























