ಮಂಗಳೂರು : ಕಾರು ಚಲಾಯಿಸುತ್ತಿದ್ದ ಮಹಿಳೆಯ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದಾಗಿ ರಸ್ತೆ ಬದಿ ಬೈಕ್ ನಿಲ್ಲಿಸಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡ ಘಟನೆ ಪಡೀಲ್ ನಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಪಡೀಲ್ ಫಸ್ಟ್ ನ್ಯೂರೋ ಆಸ್ಪತ್ರೆ ಮುಂಭಾಗದ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ತಲೆಯ ಭಾಗಕ್ಕೆ ತೀವ್ರ ಗಾಯಗೊಂಡ ಯುವಕ ಮೃತಪಟ್ಟಿದ್ದಾರೆ.
ನಮ್ಮ ಕುಡ್ಲ – ವಿಜಾರ್ಡ್ ಕೇಬಲ್ ನೆಟ್ವರ್ಕ್ ನಲ್ಲಿ ಟೆಕ್ನೀಶಿಯನ್ ಆಗಿದ್ದ, ತೊಕ್ಕೊಟ್ಟು ಬಳಿಯ ಕಲ್ಲಾಪು ನಿವಾಸಿ ಹರೀಶ್ (43) ಮೃತ ವ್ಯಕ್ತಿ.
ರಸ್ತೆಯಿಂದ ದೂರಕ್ಕೆ ಎಸೆಯಲ್ಪಟ್ಟು ತಲೆಯ ಭಾಗಕ್ಕೆ ತೀವ್ರ ಗಾಯಗೊಂಡಿದ್ದ ಹರೀಶ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಬ್ರೇನ್ ಡೆಡ್ ಆಗಿದೆಯೆಂದು ವೈದ್ಯರು ತಿಳಿಸಿದ್ದಾರೆ.
ಮಹಿಳೆಯೊಬ್ಬರು ಕಾರು ಚಲಾಯಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ್ದು, ಈ ಸಮಯ ಬ್ರೇಕ್ ಬದಲು ಎಕ್ಸ್ಲೆಟರ್ ತುಳಿದಿದ್ದರಿಂದ ಅಮಾಯಕ ವ್ಯಕ್ತಿಯ ಪ್ರಾಣ ಹೋಗುವಂತಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಪುಡಿ ಪುಡಿಯಾಗಿದ್ದು, ಚರಂಡಿಗೆ ಬಿದ್ದಿದೆ.
ಮೃತ ಹರೀಶ್ ಪತ್ನಿ , ಇಬ್ಬರು ಗಂಡು ಮಕ್ಕಳು, ತಾಯಿ, ಸಹೋದರ, ಇಬ್ಬರು ಸಹೋದರಿಯರನ್ನುಅಗಲಿದ್ದಾರೆ.


























