ಮಂಗಳೂರು : ನಗರದ ಕುಲಶೇಖರ ದ.ಕ ಸಹಕಾರಿ ಹಾಲು ಒಕ್ಕೂಟದ ಬಳಿಯ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಕನಾಡಿ ನಗರ ಠಾಣಾ ಪೊಲೀಸ್ ನೀರಿಕ್ಷಕ ಟಿ.ಡಿ ನಾಗರಾಜ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ವಶಕ್ಕೆ ಪಡೆದಿದ್ದಾರೆ.

ಕೊಡಗು ಜಿಲ್ಲೆ ವೀರಾಜಪೇಟೆ ಬೆಳ್ಳುರು ಗ್ರಾಮ ನಿವಾಸಿ ಸಚಿನ್ ಮತ್ತು ಕೊಡಗು ಜಿಲ್ಲೆ ಬಾಡಗಾ ಗ್ರಾಮ ನಿವಾಸಿ ನಿಶಾಂತ್ ಬಂಧಿತ ಆರೋಪಿಗಳು.
ಮೇ.11 ರಂದು ಕುಲಶೇಖರ ಡೈರಿ ಬಳಿಯ ಮನೆಯೊಂದರ ಹಂಚು ತೆಗೆದು ಒಳನುಗ್ಗಿದ ಕಳ್ಳರು ಮನೆಯಲ್ಲಿದ್ದ 87.5 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ 4,29,500 ರೂ. ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಉಪಯೋಗಿಸಿದ 7 ಲಕ್ಷ ರೂ. ಮೌಲ್ಯದ ಕಾರು ಸೇರಿ 11.30 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಪೈಕಿ ಸಚಿನ್ ವಿರುದ್ಧ ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣದ ಹಾಗೂ ನಿಶಾಂತ್‌ನ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮನೆಗೆ ಕನ್ನ ಪ್ರಕರಣ ದಾಖಲಾಗಿತ್ತು.

























