ಉಡುಪಿ : ಸಾವಿನ ಬರಸಿಡಿಲು ಯಾವಾಗ ಹೇಗೆ ಬೇಕಾದರೂ ಬಂದು ಅಪ್ಪಳಿಸಬಹುದು. ಕ್ರೂರ ವಿಧಿಯ ಆಟ ಬಲ್ಲವರು ಯಾರು? ಉಡುಪಿ ಜಿಲ್ಲೆಯ ಶಿರ್ವ ಪಂಚಾಯ್ತಿ ವ್ಯಾಪ್ತಿಯ ಮಾಣಿಬೆಟ್ಟು ಬಳಿ ದಾರುಣ ಘಟನೆಯೊಂದು ನಡೆದಿದೆ.
ನಿನ್ನೆ ರಾತ್ರಿ ಉಡುಪಿಯ ಹಲವೆಡೆ ಗುಡುಗು, ಸಿಡಿಲಿನ ಧಾರಾಕಾರ ಮಳೆ ಸುರಿದಿದೆ. ಇದೇ ಸಮಯದಲ್ಲಿ ರಾತ್ರಿ ಸಂಭವಿಸಿದ ಸಿಡಿಲಾಘಾತಕ್ಕೆ ಶಿರ್ವ ಮಾಣಿಬೆಟ್ಟು ನಿವಾಸಿ ರಕ್ಷಿತ್ ಪೂಜಾರಿ ಸಾವನ್ನಪ್ಪಿದ್ದಾರೆ.
ಮೃತ ರಕ್ಷಿತ್ ಪೂಜಾರಿ ಅವರು ಶಿರ್ವ ಪಂಚಾಯತ್ ವ್ಯಾಪ್ತಿಯ ಮಾಣಿಬೆಟ್ಟುವಿನ ನಿವಾಸಿಯಾಗಿದ್ದು, ರಕ್ಷಿತ್ ಪೂಜಾರಿ, ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನಲ್ಲಿ 2ನೇ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದರು.
ರಾತ್ರಿ ಸ್ನಾನ ಮಾಡಲು ಬಚ್ಚಲು ಮನೆಯ ಬಳಿ ನಿಂತಿದ್ದಾಗ ರಕ್ಷಿತ್ ಪೂಜಾರಿಗೆ ಸಿಡಿಲು ಬಡಿದಿದೆ. ನೆಲದಲ್ಲಿ ಬಿದ್ದಿದ್ದವನನ್ನು ಮನೆಯವರು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಿಡಿಲಾಘಾತಕ್ಕೆ ತುತ್ತಾಗಿದ್ದ ರಕ್ಷಿತ್ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆಗೆ ಮೃತಪಟ್ಟಿದ್ದಾರೆ.


























