ಮಂಗಳೂರು : ಬಜರಂಗದಳ ಕಾರ್ಯಕರ್ತನಿಗೆ ಸ್ಥಳೀಯ ಸಂಘದ ಸದಸ್ಯನೋರ್ವ ಹಲ್ಲೆ ನಡೆಸಿರುವ ಘಟನೆ ಕುಂಪಲ ಕೇಸರಿನಗರ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಕುಂಪಲ ನಿವಾಸಿ ಬಜರಂಗದಳ ಕಾರ್ಯಕರ್ತ ಪ್ರವೀಣ್ ಪೂಜಾರಿ ಯಾನೆ ಪಿಟ್ಟಿ (39) ಹಲ್ಲೆಗೊಳಗಾದವರು.

ಪ್ರವೀಣ್ ಪೂಜಾರಿ ಅವರಿಗೆ ಸ್ಥಳೀಯ ಕೇಸರಿ ಮಿತ್ರ ವೃಂದದ ಗೌತಮ್ ಎಂಬಾತ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಜೂ.4 ರಂದು ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪಟಾಕಿ ಸಿಡಿಸಿದ ವಿಚಾರದಲ್ಲಿ ಬಜರಂಗದಳ ಹಾಗೂ ಕೇಸರಿ ಮಿತ್ರ ವೃಂದದ ಸದಸ್ಯರ ನಡುವೆ ವಾಗ್ವಾದ ನಡೆದಿತ್ತು. ಈ ಸಂಬಂಧ ನಿನ್ನೆ ಕೆಲಸದಿಂದ ವಾಪಸ್ಸಾಗುತ್ತಿದ್ದ ಪ್ರವೀಣ್ ಪೂಜಾರಿ ಅವರನ್ನು ಅಡ್ಡಗಟ್ಟಿದ ಗೌತಮ್ ಹಲ್ಲೆ ನಡೆಸಿ ದೂಡಿದ್ದು, ಪರಿಣಾಮ ಚರಂಡಿಗೆ ಬಿದ್ದ ಪ್ರವೀಣ್ ತಲೆಗೆ ಗಾಯವಾಗಿದೆ. ಗಾಯಾಳುವನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆ ನಡೆಸಿದ ಗೌತಮ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಪಟಾಕಿ ಸಿಡಿಸಿದ ದ್ವೇಷಕ್ಕೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ
ಉಳ್ಳಾಲ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

























