ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಬಗ್ಗೆ ಒಂದು ಶಾಕಿಂಗ್ ಸುದ್ದಿ ಕೇಳಿಬಂದಿದೆ. ನೂತನ ಸಂಸದೆ ಆಗಿರುವ ಅವರು ದೆಹಲಿಗೆ ತೆರಳುವಾಗ ವಿಮಾನ ನಿಲ್ದಾಣದಲ್ಲಿ ಅವರಿಗೆ ಕಪಾಳಮೋಕ್ಷ ಮಾಡಲಾಗಿದೆ!
ಚಂಡಿಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಮಹಿಳಾ ಸಿಬ್ಬಂದಿಯೊಬ್ಬರು ಕಂಗನಾರ ಕೆನ್ನೆಗೆ ಬಾರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಕಂಗನಾ ಜಯ ಸಾಧಿಸಿದ್ದಾರೆ.
ಸಂಸದೆ ಆಗಿರುವ ಖುಷಿಯಲ್ಲಿ ಅವರು ದೆಹಲಿಗೆ ಹೊರಟ್ಟಿದ್ದರು. ಈ ವೇಳೆ ಸಿಐಎಸ್ಎಫ್ ಸಿಬ್ಬಂದಿಯು ಕಂಗನಾ ರಣಾವತ್ ಅವರ ಕೆನ್ನೆಗೆ ಹೊಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ದೆಹಲಿ ತಲುಪಿದ ಕೂಡಲೇ ಕಂಗನಾ ರಣಾವತ್ ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಾ ನಿರ್ದೇಶಕರಾದ ನೀನಾ ಸಿಂಗ್ ಅವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಚಂಡಿಗಢ ವಿಮಾನ ನಿಲ್ದಾಣದ ನಿರ್ಬಂಧಿತ ಸ್ಥಳದಲ್ಲಿ ತಾವು ನಿಂತಿದ್ದಾಗ ಸಿಐಎಸ್ಎಫ್ ಮಹಿಳಾ ಕಾನ್ಸ್ಟೇಬಲ್ ಬಂದು ಕಪಾಳಕ್ಕೆ ಹೊಡೆದರು ಎಂದು ಕಂಗನಾ ರಣಾವತ್ ಆರೋಪಿಸಿದ್ದಾರೆ.
ಕಂಗನಾ ರಣಾವತ್ ಅವರ ಕೆನ್ನೆಗೆ ಬಾರಿಸಿದ್ದಾರೆ ಎನ್ನಲಾದ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಘಟನೆಯ ಕುರಿತು ವಿಚಾರಣೆ ನಡೆಯುತ್ತಿದೆ. ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.
ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ಕಂಗನಾ ರಣಾವತ್ ಅವರು ಈ ವರ್ಷ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಆದರು. ಮೂಲತಃ ಹಿಮಾಚಲ ಪ್ರದೇಶದವರಾದ ಅವರು ಮಂಡಿ ಕ್ಷೇತ್ರದಿಂದ ಟಿಕೆಟ್ ಪಡೆದರು. ಮೊದಲ ಪ್ರಯತ್ನದಲ್ಲೇ ಅವರು ಸಂಸದೆ ಆಗಿದ್ದಾರೆ. ಕಂಗನಾ ಎದುರು ಚುನಾವಣೆಗೆ ನಿಂತಿದ್ದ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಅವರು 4,62,267 ಮತಗಳನ್ನು ಪಡೆದರು. 5,37,022 ಮತಗಳನ್ನು ಪಡೆದ ಕಂಗನಾ ಅವರಿಗೆ ಗೆಲುವಿನ ನಗೆ ಬೀರಿದರು.

























