ಮಂಗಳೂರು : ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಮಂಗಳೂರಿನ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳ ಪೋಷಕರಿಗೆ ಪಾಕಿಸ್ತಾನದಿಂದ ಎನ್ನಲಾದ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ವರದಿಯಾಗಿದೆ.
ಪೊಲೀಸರ ಹೆಸರಿನಲ್ಲಿ ಬರುತ್ತಿರುವ ನಕಲಿ ಕರೆಗಳಿಂದ ಪೋಷಕರು ಆತಂಕಕ್ಕೊಳಗಾಗುವಂತಾಗಿದೆ. ದೂರವಾಣಿ ಮೂಲಕ ಕರೆ ಮಾಡುವವರು, ‘ನಿಮ್ಮ ಮಕ್ಕಳನ್ನು ಬಂಧಿಸಿದ್ದೇವೆ. ಬಿಡುಗಡೆ ಮಾಡಬೇಕಾದರೆ ಸಹಾಯ ಮಾಡುತ್ತೇವೆ’ ಎಂದು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎನ್ನಲಾಗಿದೆ.
ಜನರಿಂದ ಹಣ ಪೀಕಿಸಲು ವಿದೇಶದಲ್ಲಿ ಕುಳಿತು ವಂಚಕರು ತಂತ್ರ ಹೂಡಿರುವ ಅನುಮಾನ ಇದೀಗ ಬಲವಾಗಿದೆ. ದುಷ್ಕರ್ಮಿಗಳು ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಪೋಷಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಸಿಬಿಐ ಅಧಿಕಾರಿ ಸೋಗಿನಲ್ಲಿಯೂ ದುಷ್ಕರ್ಮಿಗಳ ತಂಡ ದೂರವಾಣಿ ಕರೆ ಮಾಡುತ್ತಿದೆ. ಪಾಕಿಸ್ತಾನ, ಪೋಲಂಡ್, ಕೆನಡಾದ ಕೋಡ್ ಸಂಖ್ಯೆ ಬಳಸಿ ಕರೆ ಮಾಡಲಾಗುತ್ತಿದೆ.
ಜೂನ್ 11 ರಿಂದ ಈವರಗೆ 10ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೋಷಕರನ್ನು ಟಾರ್ಗೆಟ್ ಮಾಡಿರುವ ದುರುಳರು ದೂರವಾಣಿ ಕರೆ ಮಾಡಿದ್ದಾರೆ. ನಿಮ್ಮ ಮಕ್ಕಳು ಕಿಡ್ನಾಪ್ ಆಗಿದ್ದಾರೆ. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕರೆ ಮಾಡಿದವರು ಹೇಳಿದಾಗ ಪೋಷಕರು ಕಂಗಾಲಾಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ವಂಚಕರು ಪೋಷಕರಿಂದ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ವಂಚಕರು ಹಿಂದಿಯಲ್ಲಿ ಮಾತನಾಡಿ ಬೆದರಿಕೆ ಹಾಕುತ್ತಿರುವುದು ತಿಳಿದುಬಂದಿದೆ.
ಬೆದರಿಕೆ ಕರೆ ಬೆನ್ನಲ್ಲೇ ಕಾಲೇಜುಗಳಿಗೆ ಹೋಗಿ ಮಕ್ಕಳ ಇರುವಿಕೆಯ ಬಗ್ಗೆ ಪೋಷಕರು ಖಚಿತ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ಡಾಟಾಬೇಸ್ ಸೈಟ್ಗಳಿಂದ ವಿದ್ಯಾರ್ಥಿಗಳು, ಪೋಷಕರ ಮಾಹಿತಿಗಳನ್ನು ವಂಚಕರು ಪಡೆದಿರುವ ಸಂಶಯ ವ್ಯಕ್ತವಾಗಿದೆ. ನಕಲಿ ಕರೆಗಳ ಬಗ್ಗೆ ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜತೆಗೆ, ನಕಲಿ ಕರೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.
ಫೆಡೆಕ್ಸ್ ಇಂಟರ್ನ್ಯಾಷನಲ್ ಕೊರಿಯರ್ ಹೆಸರಿನಲ್ಲಿ ನಕಲಿ ಕರೆ ಮಾಡಿದ ವಂಚಕರ ಮೋಸದ ಬಲೆಗೆ ಬಿದ್ದು ಹಲವು ಮಂದಿ ಹಣ ಕಳೆದುಕೊಂಡ ಘಟನೆಗಳು ಮಂಗಳೂರು ಸುತ್ತಮುತ್ತ ಇತ್ತೀಚೆಗೆ ವರದಿಯಾಗಿದ್ದವು. ಇದೀಗ ಹೊಸ ವಿಧಾನದ ಮೂಲಕ ಸೈಬರ್ ವಂಚಕರು ಜನರನ್ನು ಮೋಸಗೊಳಿಸಿ ಹಣ ಎಗರಿಸುತ್ತಿದ್ದಾರೆ.

























