ಪುತ್ತೂರು : ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಸಮೀಪದ ಶೇಖಮಲೆ ಎಂಬಲ್ಲಿ ಆಲ್ಟೊ 800 ಕಾರು ಮತ್ತು ಬೊಲೆರೋ ನಡುವೆ ಡಿಕ್ಕಿ ಸಂಭವಿಸಿ, ಆಲ್ಟೊ ಕಾರಿನಲ್ಲಿದ್ದ ಸೋಮವಾರ ಪೇಟೆ ಮೂಲದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಜೂ.16 ರಂದು ಸಂಜೆ ನಡೆದಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯಲ್ಲಿ ಆಲ್ಟೊ ಕಾರಿನಲ್ಲಿದ್ದ ಮಡಿಕೇರಿ ಸೋಮವಾರಪೇಟೆಯ ತ್ಯಾಗತ್ತೂರು ನಿವಾಸಿ ಟ್ಯಾಂಕರ್ ಚಾಲಕ ನಾಗಪ್ಪ ರವೀಂದ್ರ (57), ಸೋಮವಾರಪೇಟೆ ನಿವಾಸಿ ಲೋಕೇಶ್ (48) ಮೃತಪಟ್ಟಿದ್ದು, ಮೃತ ರವೀಂದ್ರ ಅವರ ಸಹೋದರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಬಿ.ಎನ್ ರವೀಂದ್ರ ರವರು ಮಾರುತಿ 800 ಆಲ್ಟೋ ಕಾರಿನಲ್ಲಿ ಸಹ ಪ್ರಯಾಣಿಕನಾಗಿ ಲೋಕೇಶ ಎಂಬುವರೊಂದಿಗೆ, ಜೂ.16 ರಂದು ಸಂಜೆ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಮಡಿಕೇರಿ ಕಡೆಗೆ ಹೋಗುತ್ತಿರುವಾಗ, ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಶೇಖಮಲೆ ಸೇತುವೆ ಬಳಿ ಮಹೇಂದ್ರ ಬೊಲೆರೋ ವಾಹನವನ್ನು ಅದರ ಚಾಲಕ ರವಿರಾಜ್ ರೈ ರವರು, ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ಸದ್ರಿ ಕಾರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರು ಚಾಲಕ ಹಾಗೂ ಸಹ ಪ್ರಯಾಣಿಕ ಲೋಕೇಶ್ ರವರ ತಲೆಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಇಬ್ಬರೂ ಗಾಯಾಳುಗಳು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ, ಆ.ಕ್ರ 74/2024 ಕಲಂ: 279,337,304(A)ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಮೃತ ರವೀಂದ್ರ ಮಂಗಳೂರಿನಲ್ಲಿ ಟ್ಯಾಂಕರ್ ಚಾಲಕರಾಗಿದ್ದು, ಅಲ್ಲೇ ರೂಮ್ ಮಾಡಿದ್ದರು. ರೂಮ್ ಖಾಲಿ ಮಾಡಿ ಅಲ್ಲಿದ್ದ ಸಣ್ಣಪುಟ್ಟ ಸಾಮಾಗ್ರಿಗಳನ್ನು ಸೋಮವಾರಪೇಟೆಯ ಮನೆಗೆ ಕೊಂಡೊಯ್ಯಲೆಂದು ಕಾರಿನಲ್ಲಿ ಮಂಗಳೂರಿಗೆ ಹೋಗಿ ಅಲ್ಲಿಂದ ವಾಪಾಸ್ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮಂಗಳೂರಿನಿಂದ ಸೋಮವಾರಪೇಟೆ ಕಡೆಗೆ ಹೋಗುತ್ತಿದ್ದ ಆಲ್ಟೊ 800 ಕಾರು ಶೇಖಮಲೆ ಸೇತುವೆ ಬಳಿ ಬೈಕ್ ವೊಂದನ್ನು ಓವರ್ ಟೇಕ್ ಮಾಡುವ ವೇಳೆ ಅದಕ್ಕೆ ತಾಗಿಕೊಂಡು ಹೋಗಿದ್ದು, ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬೊಲೆರೋ ವಾಹನಕ್ಕೆ ಡಿಕ್ಕಿಯಾಗಿದೆ ಎನ್ನಲಾಗಿದೆ.
ಘಟನೆಯಲ್ಲಿ ಬೊಲೆರೋ ವಾಹನದಲ್ಲಿದ್ದ ರವಿರಾಜ್ ರೈ ಸಜಂಕಾಡಿ ಹಾಗೂ ಅವರ ಪತ್ನಿ ಗಾಯಗೊಂಡಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ವಿಷಯದ ತಿಳಿದು ಅರುಣ್ ಕುಮಾರ್ ಪುತ್ತಿಲ ಆಸ್ಪತ್ರೆಗೆ ಮತ್ತು ಠಾಣೆಗೆ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.




























