ಮಂಗಳೂರು : ಬಿಜೆಪಿಯ ಹಿರಿಯ ನಾಯಕ, ವಿಧಾನ ಪರಿಷತ್ ನ ಮಾಜಿ ಸದಸ್ಯ ಭಾನುಪ್ರಕಾಶ್ ರವರು ನಿಧನರಾದರು.

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಶಿವಮೊಗ್ಗ ನಗರದ ಗೋಪಿ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾನುಪ್ರಕಾಶ್ ಅವರು ಭಾಗಿಯಾಗಿದ್ದರು. ಪ್ರತಿಭಟನೆ ವೇಳೆ ಹೃದಯಾಘವಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಬಿಜೆಪಿ ಕಾರ್ಯಕರ್ತರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಸ್ವಗ್ರಾಮ ಮತ್ತೂರಿಗೆ ಮೃತದೇಹ ರವಾನೆ ಮಾಡಲಾಗಿದೆ.
ಶಿವಮೊಗ್ಗ ತಾಲೂಕಿನ ಮತ್ತೂರು ಗ್ರಾಮದ ಎಂ ಬಿ ಭಾನುಪ್ರಕಾಶ್ ಬಿಜೆಪಿ ಸಂಘಟನೆಯಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದರು.
ಭಾನುಪ್ರಕಾಶ್ ಬಿಜೆಪಿಯ ಹಿರಿಯ ಮುಖಂಡ. ಸರಳ, ಸಜ್ಜನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾದವರು. ಸತ್ಯ, ನ್ಯಾಯ, ನಿಷ್ಠೆಯ ಪರವಾಗಿ ಮಾತನಾಡುವ ಉತ್ತಮ ವಾಗ್ಮಿಯಾಗಿದ್ದರು.
ಗಾಜನೂರು ಜಿ.ಪಂ. ಕ್ಷೇತ್ರದಿಂದ ಆಯ್ಕೆಯಾಗಿದ್ದ ಭಾನುಪ್ರಕಾಶ್ 2001ರಿಂದ 2005ರ ಅವಧಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. ಬಳಿಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.




























