ಲಕ್ನೋ : ತಂದೆಯ ಕೊನೆಯ ಆಸೆ ಈಡೇರಿಸಲು ಇಬ್ಬರು ಹೆಣ್ಮಕ್ಕಳು ಐಸಿಯು ವಾರ್ಡ್ನಲ್ಲೇ ಮದುವೆಯಾದ ಪ್ರಸಂಗ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಲಕ್ನೋದ ಸೈಯದ್ ಮುಹಮ್ಮದ್ ಜುನೈದ್ ಇಕ್ಬಾಲ್ ಅವರ ಇಬ್ಬರು ಪುತ್ರಿಯರಿಗೆ ಜೂನ್ 22 ರಂದು ಮದುವೆ ನಿಶ್ಚಯವಾಗಿತ್ತು. ಈ ನಡುವೆ ಇಕ್ಬಾಲ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.
ಆರೋಗ್ಯ ಹದಗೆಟ್ಟರೂ ತಾವು ಮುಂಬೈನಲ್ಲಿ ನಡೆಯಬೇಕಿದ್ದ ಮಕ್ಕಳ ಮದುವೆಗೆ ಹೋಗಬೇಕು ಎಂದು ವೈದ್ಯರ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಕಳೆದ ಎರಡು ದಿನಗಳಿಂದ ಇಕ್ಬಾಲ್ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಹೀಗಾಗಿ ಮದುವೆಗೆ ತೆರಳಲು ವೈದ್ಯರು ಅನುಮತಿ ನೀಡಿರಲಿಲ್ಲ.
ತಮ್ಮ ಕೊನೆಯ ಆಸೆಯಂತೆ ಹೆಣ್ಣುಮಕ್ಕಳ ಮದುವೆ ನೋಡುವ ಬಯಕೆಯನ್ನು ವೈದ್ಯರ ಬಳಿ ತಿಳಿಸಿದ್ದರು. ಅದಕ್ಕೆ ವೈದ್ಯರು ಆಸ್ಪತ್ರೆಯಲ್ಲೇ ಮದುವೆ ಆಗಲು ಒಪ್ಪಿಗೆ ನೀಡಿದರು. ಐಸಿಯುಗೆ ವಧು-ವರ ಹಾಗೂ ಮದುವೆ ನಡೆಸಿಕೊಡುವ ಮೌಲಾಗೆ ಅನುಮತಿ ನೀಡಲಾಗಿತ್ತು. ಆಸ್ಪತ್ರೆ ಸಿಬ್ಬಂದಿ ಸಮ್ಮುಖದಲ್ಲಿ ಇಕ್ಬಾಲ್ ಮುಂದೆಯೇ ಮುಸ್ಲಿಂ ಸಂಪ್ರದಾಯದಂತೆ ವಿವಾಹ ನೆರವೇರಿಸಲಾಯಿತು. ಜುನೈದ್ ಇಕ್ಬಾಲ್ ತನ್ನ ಹೆಣ್ಣುಮಕ್ಕಳ ಮದುವೆಯನ್ನು ನೋಡಿದ ಆನಂದಕ್ಕೆ ಪಾರವೇ ಇರಲಿಲ್ಲ ಎಂದು ವರದಿಯಾಗಿದೆ.