ಪುತ್ತೂರು : ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಗುರುವಾರ ಕೊವ್ಯಾಕ್ಸಿನ್ ಎರಡನೇ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆಯಲು ಬೆಳಿಗ್ಗಿನಿಂದಲೇ ನೂರಾರು ಜನ ಆಸ್ಪತ್ರೆಗೆ ಧಾವಿಸಿದ ಕಾರಣ ನೂಕು ನುಗ್ಗಲು ಉಂಟಾಯಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡುವಂತಾಯಿತು.
ಏಪ್ರಿಲ್ ಮೊದಲ ವಾರದಲ್ಲಿ ಕೊವ್ಯಾಕ್ಸಿನ್ ಮೊದಲ ಡೋಸ್ ಪಡೆದುಕೊಂಡವರಿಗೆ ಗುರುವಾರ ಎರಡನೇ ಡೋಸ್ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಜನ ಹಿರಿಯ ನಾಗರಿಕರು ಲಸಿಕೆ ಪಡೆಯಲು ಬಂದಿದ್ದು, ಉದ್ದದ ಸರತಿ ಸಾಲು ಕಂಡು ಬಂತು. ಟೋಕನ್ ಪಡೆಯುವ ಸಂದರ್ಭ ನೂಕು ನುಗ್ಗಲು ಉಂಟಾಯಿತು. ಗೃಹರಕ್ಷಕ ದಳದ ಸಿಬ್ಬಂದಿ ಜನರನ್ನು ಸಮಾದಾನ ಪಡಿಸಿ ತಾಳ್ಮೆಯಿಂದ ಸಹಕರಿಸುವಂತೆ ವಿನಂತಿಸುತ್ತಿದ್ದರು.ಕೊರೊನಾ ಕಾಲಘಟ್ಟದಲ್ಲಿ ಸಾಮಾಜಿಕ ಅಂತರ ಅತ್ಯವಶ್ಯಕವಾಗಿದ್ದರೂ ಅಂತರದ ಬದಲು ಜನ ಒಬ್ಬರಿಗೊಬ್ಬರು ಅಂಟಿಕೊಂಡೇ ನಿಂತಿದ್ದರು.