ಪುತ್ತೂರು : ಪ್ರತೀ ಮಳೆಗಾಲದಲ್ಲಿ ವನಮಹೋತ್ಸವ ಬಹಳ ಅಬ್ಬರದಿಂದ ಆಚರಣೆ ಮಾಡುತ್ತೇವೆ. ಸಿಕ್ಕ ಸಿಕ್ಕಲ್ಲೆಲ್ಲ ಗಿಡ ನೆಡುತ್ತಾರೆ ಆದರೆ ಅದು ನೆಟ್ಟ ಬಳಿಕ ಏನಾಗಿದೆ ಎಂದು ನೋಡಬೇಕಾದ ಅಥವಾ ಅದನ್ನು ಆರೈಕೆ ಮಾಡಬೇಕಾದ ಜವಾವ್ದಾರಿಯೂ ನಮಗಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿಯಲ್ಲಿ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.
ಪುತ್ತೂರು-ಉಪ್ಪಿನಂಗಡಿ ರಸ್ತೆ ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ರಸ್ತೆ ಬದಿಗಳಲ್ಲಿಯೂ ಗಡಿಗಳನ್ನು ನೆಡುವಂತೆ ಸೂಚನೆ ನೀಡಿದ್ದೇನೆ. ಗಿಡಗಳನ್ನು ಪ್ರಾಣಿಗಳು ತಿನ್ನದಂತೆ ಅದಕ್ಕೆ ತಡೆಬೇಲಿ ಮತ್ತು ಕಾಲ ಕಾಲಕ್ಕೆ ಅದಕ್ಕೆ ಗೊಬ್ಬರವನ್ನೂ ಹಾಕುವಂತೆ ಸೂಚನೆ ನೀಡಿದ್ದೇನೆ. ಗಿಡ ನೆಟ್ಟು ಕಾರ್ಯಕ್ರಮ ಮಾಡಿ ಕೈ ತೊಳೆದುಕೊಂಡರೆ ಸಾಲದು ನೆಟ್ಟ ಗಿಡ ಮರವಾಗುವ ತನಕ ಅದನ್ನು ಉಳಿಸುವ ಜವಾಬ್ದಾರಿ ಇಲಾಖೆ ಮತ್ತು ಸಾರ್ವಜನಿಕರಿಗಿರಬೇಕು. ರಸ್ತೆ ಬದಿ ನೆಟ್ಟ ಗಿಡ ನಮ್ಮ ಗಿಡ ಎಂಬ ಪ್ರೀತಿ ಸಾರ್ವಜನಿಕರಲ್ಲಿ ಮೂಡಬೇಕಿದೆ.

ಯಾವುದೇ ಕಾರಣಕ್ಕೂ ಸಾರ್ವಜನಿಕರು ನೆಟ್ಟ ಗಿಡವನ್ನು ಕೀಳಬೇಡಿ ಗಿಡಗಳು ಯಾರಿಗಾದರೂ ಬೇಕಾದಲ್ಲಿ ಇಲಾಖೆಯವರು ತಲುಪಿಸುವ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಿದರು.
ನಾಶವಾಗುತ್ತಿರುವ ಗಿಡಗಳ ಪೋಷಣೆ ಮಾಡಬೇಕು :
ಈಗಾಗಲೇ ಅನೇಕ ಕಾಟು ಹಣ್ಣಿನ ಗಿಡಗಳು ನಾಶವಾಗುತ್ತಿದೆ. ಕಾಟು ಮಾವು, ನೇರಳೆ ಸೇರಿದಂತೆ ಹೆಚ್ಚಿನ ಕಾಟು ಗಿಡಗಳು ವಿನಾಶದ ಅಂಚಿನಲ್ಲಿದೆ ಅದನ್ನು ರಸ್ತೆ ಬದಿಯಲ್ಲಿ ನೆಡುವ ಕೆಲಸ ನಡೆಯುತ್ತಿದೆ. ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ರೈ ಚಾರಿಟೇಬಲ್ ಟ್ರಸ್ಟ್ ವನಮಹೋತ್ಸವ ಕಾರ್ಯಕ್ರಮವನ್ನು ತಾಲೂಕಿನಾದ್ಯಂತ ಜಂಟಿಯಾಗಿ ನಡೆಸಲಾಗುತ್ತಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಈ ಬಾರಿ ವನಮಹೋತ್ಸವ ನಡೆಯಲಿದೆ ಎಂದು ಹೇಳಿದರು.

ರಸ್ತೆ ಮಧ್ಯೆ ಇರುವ ಡಿವೈಡರ್ ಗಳ ಮಧ್ಯೆ ವಿವಿಧ ತರದ ಹೂವಿನ ಗಿಡಗಳನ್ನು ನೆಟ್ಟು ರಸ್ತೆಯನ್ನು ಸೌಂದರ್ಯೀಕರಣ ಮಾಡಲಾಗುತ್ತದೆ. ಪುತ್ತೂರಿನಿಂದ ಉಪ್ಪಿನಂಗಡಿ ತನಕ ಹೂವಿನ ಗಿಡ ನೆಡಲಾಗುತ್ತದೆ. ಆಂಧ್ರಪ್ರದೇಶದಿಂದ ತಂದಿರುವ ಕಾಗದ ಹೂವಿನ ಗಿಡಗಳೂ ಡಿವೈಡರ್ ಮಧ್ಯೆ ಕಂಗೊಳಿಸಲಿದೆ ಅದನ್ನು ಪೋಷಣೆ ಮಾಡುವ ಕೆಲಸವೂ ನಡೆಯಲಿದೆ ಎಂದು ಹೇಳಿದರು.
ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಮನೆಯಲ್ಲಿ ಒಂದು ಗಿಡವನ್ನು ನೆಡಬೇಕು. ಪೋಷಕರು ಇದಕ್ಕೆ ಸಹಕಾರ ನೀಡಬೇಕು. ಮಕ್ಕಳಿಗೆ ಗಿಡವನ್ನು ನೀಡುವ ಮತ್ತು ಗಿಡ ನೆಡಲು ಆಸಕ್ತಿ ಇದ್ದವರಿಗೆ ಗಿಡ ನೀಡುವ ಕೆಲಸ ಅರಣ್ಯ ಇಲಾಖೆ ಮಾಡಲಿದೆ ಎಂದು ಶಾಸಕರು ತಿಳಿಸಿದರು.
ಬೇಸಿಗೆಯಲ್ಲಿ ಕಾಟು ಮಾವು ಕೊಯ್ಯದಂತೆ ತಡೆ ಮಾಡಿದ ಕಾರಣ ಈ ವರ್ಷ ಬಹುತೇಕ ಕಡೆಗಳಲ್ಲಿ ಸಾರ್ವಜನಿಕರಿಗೆ ಕಾಟು ಮಾವು ಸಿಕ್ಕಿದೆ ಎಂಬ ಮಾಹಿತಿ ಇದೆ ಎಂದು ಶಾಸಕರು ಹೇಳಿದರು.
ಪುತ್ತೂರು ಉಪ್ಪಿನಂಗಡಿ ರಸ್ತೆ ಸೇರಿದಂತೆ ಪುತ್ತೂರು ತಾಲೂಕು ವ್ಯಾಪ್ತಿಯ ರಸ್ತೆ ಬದಿ ಮತ್ತು ಆಯ್ದ ಸ್ಥಳಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ನಡೆಯಲಿದೆ. ವನಮಹೋತ್ಸವ ಯಶಸ್ವಿಯಾಗಲು ಎಲ್ಲರ ಸಹಕಾರ ಅತೀ ಅಗತ್ಯವಾಗಿ ಬೇಕಾಗಿದೆ ಎಂದು ಪುತ್ತೂರು ಸಹಾಯಕ ಸಂರಕ್ಷಣಾಧಿಕಾರಿ ಸುಬ್ಬ ನಾಯ್ಕ ಹೇಳಿದರು.
ರೈ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಮಾತನಾಡಿ, ಶಾಸಕರು ಗಿಡ ನೆಡುವ ಕಾರ್ಯಕ್ರಮಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ. ಗಿಡಕ್ಕೆ ಗೊಬ್ಬರ ಹಾಕುವ ಕಾರ್ಯಕ್ಕೆ ಚಾಲನೆಯನ್ನು ನೀಡಿದ್ದೇವೆ. ರಸ್ತೆ ಬದಿಯಲ್ಲಿರುವ ಮರಗಳನ್ನು ರಸ್ತೆ ಅಭಿವೃದ್ದಿ ಮಾಡುವ ವೇಳೆ ಕಡಿಯಲಾಗಿದೆ. ಆ ಜಾಗದಲ್ಲಿ ಮತ್ತೆ ಗಿಡ ಬೆಳೆಸುವ ಮೂಲಕ ಹಳೆಯ ವೈಭವ ಮರುಕಳಿಸಬೇಕು ಎಂದು ಹೇಳಿದರು.
ಅರಣ್ಯಾಧಿಕಾರಿ ಕಿರಣ್ ಬಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸೇರಿದಂತೆ ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳು, ರೈ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

























