ಪುತ್ತೂರು : ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಶಾಸಕ ಅಶೋಕ್ ಕುಮಾರ್ ರೈಯವರು ಜೂ.24 ರಂದು ದಿಢೀರ್ ಭೇಟಿ ನೀಡಿದರು.
ಬಸ್ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳ ಜೊತೆ ರೂಟ್ ಬಸ್ ಸಂಚಾರದ ವ್ಯವಸ್ಥೆ ಮತ್ತು ಅವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಸರಕಾರಿ ಬಸ್ ಸರಿಯಾದ ಸಮಯಕ್ಕೆ ಬರುತ್ತಿಲ್ಲ, ಕೆಲವೊಂದು ಬಾರಿ ಬಸ್ ಇರುವುದಿಲ್ಲ, ಬಸ್ ಖಾಲಿ ಇದ್ದರೂ ನಿಲ್ಲಿಸುವುದಿಲ್ಲ, ಬಸ್ ಸಮಯ ಪಾಲನೆಯಿಲ್ಲ, ನಾವು ಬಸ್ ನಿಲ್ದಾಣದಲ್ಲೇ ಬಸ್ಗಾಗಿ ಕಾಯುತ್ತಿದ್ದರೂ ಬಸ್ ಇಲ್ಲ ಎಂಬ ಬಗ್ಗೆ ಸಂಬಂಧಿಸಿದವರು ಯಾವುದೇ ಮಾಹಿತಿ ನೀಡುವುದಿಲ್ಲ, ಬೆಳಿಗ್ಗೆ ತಡವಾಗಿ ಬಸ್ ಬರುತ್ತದೆ. ಸಂಜೆ ಮನೆಗೆ ಹೋಗುವ ವೇಳೆ ಬಸ್ ಇರುವುದಿಲ್ಲ, ಇದ್ದರೂ ರಶ್ ಇರುತ್ತದೆ ಎಂಬ ದೂರುಗಳನ್ನು ಶಾಸಕರ ಬಳಿ ವಿದ್ಯಾರ್ಥಿಗಳು ಹೇಳಿದರು.

ವಿದ್ಯಾರ್ಥಿಗಳು ಈ ಆರೋಪ ಮಾಡುವ ವೇಳೆ ಸ್ಥಳೀಯ ಕೆಎಸ್ಆರ್ಟಿಸಿ ಅಧಿಕಾರಿಗಳೂ ಶಾಸಕರ ಜೊತೆಗಿದ್ದರು. ವಿದ್ಯಾರ್ಥಿಗಳು ಬಸ್ ಸಮಸ್ಯೆ ಬಗ್ಗೆ ಶಾಸಕರಲ್ಲಿ ಹೇಳುತ್ತಿರುವಾಗಲೇ ಅಧಿಕಾರಿಗಳು ಆ ಬಗ್ಗೆ ಮಾಹಿತಿ ನೀಡುತ್ತಿದ್ದರು.
ಸದ್ಯಕ್ಕೆ ಬಸ್ ಕೊರತೆ ಇದೆ ಮುಂದಿನ 15 ದಿನದೊಳಗೆ ವ್ಯವಸ್ಥೆ ಸರಿಪಡಿಸುವುದಾಗಿ ಶಾಸಕರು ಭರವಸೆ ನೀಡಿದರು.
ನಾವು ಸ್ಕೂಲ್ಗೆ ಬರಲು ಬೆಳಿಗ್ಗೆಯೇ ಮನೆಯಿಂದ ಹೊರಡುತ್ತೇವೆ ಆದರೆ ಶಾಲೆಗೆ ತಲುಪುವಾಗ ತಡವಾಗುತ್ತದೆ ಇದಕ್ಕೆ ಕಾರಣ ಕೆಎಸ್ಆರ್ಟಿಸಿ ಬಸ್ ಚಾಲಕರು, ಕೆಲವೊಮ್ಮೆ ಬಸ್ ಖಾಲಿ ಇದ್ದರೂ ನಮ್ಮನ್ನು ಕಂಡರೆ ಸಾಕು ನಿಲ್ಲಿಸದೆ ಹೋಗುತ್ತಾರೆ. ಅವರಿಗೆ ಬಸ್ ನಿಲ್ಲಿಸುವಂತೆ ಹೇಳಿ ಸರ್ ಎಂದು ವಿದ್ಯಾರ್ಥಿಗಳು ಶಾಸಕರಲ್ಲಿ ಮನವಿ ಮಾಡಿದರು.
ಯಾಕೆ ಬಸ್ ನಿಲ್ಲಿಸುವುದಿಲ್ಲ ? ನಿಲ್ಲಿಸದ ಬಸ್ ಯಾವುದು ಎಂದು ಬಸ್ಸಿನ ನಂಬರ್ ಬರೆದು ಕೊಡಿ ಆ ಬಗ್ಗೆ ನಾನು ವಿಚಾರಿಸುತ್ತೇನೆ. ಎಲ್ಲಾ ಚಾಲಕರಿಗೂ ವಿದ್ಯಾರ್ಥಿಗಳನ್ನು ಕಂಡರೆ ಬಸ್ ನಿಲ್ಲಿಸುವಂತೆ ಸೂಚನೆ ನೀಡುವಂತೆ ಅಧಿಕಾರಿಗೆ ಶಾಸಕರು ಸೂಚನೆ ನೀಡಿದರು.


























