ಬಂಟ್ವಾಳ : ತಾಲೂಕಿನ ಮೂರು ಗ್ರಾಮಗಳ ಧಾರ್ಮಿಕ ಕೇಂದ್ರ ಹಾಗೂ ಶಿಶುಮಂದಿರವೊಂದಕ್ಕೆ ಕಳ್ಳರು ನುಗ್ಗಿ ನಗದು ಕಳವು ಮಾಡಿದ ಘಟನೆ ಆದಿತ್ಯವಾರ ಮಧ್ಯರಾತ್ರಿ ವೇಳೆ ನಡೆದಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ನರಿಕೊಂಬು ಗ್ರಾಮದಲ್ಲಿರುವ ಭಜನ ಮಂದಿರ ಹಾಗೂ ಕೊಪ್ಪಳಕೋಡಿ ಎಂಬಲ್ಲಿರುವ ಶಿಶು ಮಂದಿರದ ಕಮಿಟಿಯ ಸದಸ್ಯರಾದ ಕಿಶೋರ್ ಶೆಟ್ಟಿ ಎಂಬವರು ದೂರು ನೀಡಿದ್ದು, ಜೂ.24 ರಂದು ಬೆಳಿಗ್ಗೆ ಮಂದಿರಕ್ಕೆ ಹೋದಾಗ, ಮಂದಿರದ ಮುಂಬಾಗಿಲಿನ ಲಾಕನ್ನು ಮುರಿದು, ಯಾರೋ ಕಳ್ಳರು ಒಳ ಪ್ರವೇಶಿಸಿ ಮಂದಿರದ ಮುಂಭಾಗದ ಹಾಲ್ ನಲ್ಲಿಟ್ಟಿದ್ದ ಕಾಣೆಕೆ ಡಬ್ಬಿಗೆ ಹಾಕಿದ ಬೀಗವನ್ನು ಮುರಿದು ಕಾಣಿಕೆ ಡಬ್ಬಿಯಲ್ಲಿದ್ದ ನಗದು ಹಣವನ್ನು ಕಳವು ಮಾಡಿರುವುದು ಕಂಡುಬಂದಿದ್ದು, ಮಂದಿರಕ್ಕೆ ಸಂಬಂಧಿಸಿದ ಕಛೇರಿಯ ಬೀಗವನ್ನು ಮುರಿದು ಗೊಡ್ರೆಜ್ ನ ಬಾಗಿಲನ್ನು ತೆರೆದು, ಅದರಲ್ಲಿದ್ದ ಸೊತ್ತುಗಳನ್ನು ಚಿಲ್ಲಾಪಿಲ್ಲಿ ಮಾಡಿ, ಗೊಡ್ರೆಜ್ ನಲ್ಲಿದ್ದ ರೂ 3,000/- ರೂಪಾಯಿ ನಗದು ಹಣವನ್ನು ಕಳವು ಮಾಡಿದ್ದಾರೆ.
ಕೊಪ್ಪಳಕೋಡಿ ಎಂಬಲ್ಲಿರುವ ಶಿಶು ಮಂದಿರದ ಬಾಗಿಲನ್ನೂ ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿ, ಮಂದಿರದೊಳಗಿದ್ದ ಕಾಣಿಕೆ ಡಬ್ಬಿಯಲ್ಲಿದ್ದ ಅಂದಾಜು 600/- ರೂಪಾಯಿ ನಗದು ಹಣವನ್ನು ಕಳವು ಮಾಡಿದ್ದು, ಆಫೀಸು ರೂಮ್ ನಲ್ಲಿದ್ದ ಗೊಡ್ರೆಜ್ ಗಳ ಸೊತ್ತುಗಳನ್ನು ಚಿಲ್ಲಾಪಿಲ್ಲಿ ಮಾಡಿದ್ದು, ಕಳ್ಳರು ಸದ್ರಿ ಸ್ಥಳಗಳಿಂದ ಒಟ್ಟು 3,600/- ರೂಪಾಯಿಯನ್ನು ಕಳವು ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ:- 110/2024 ಕಲಂ: 457, 380 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಸುಧೆಕಾರು ಎಂಬಲ್ಲಿನ ದೈವಸ್ಥಾನದ ಅರ್ಚಕರಾದ ಜಯರಾಮ ಮೂಲ್ಯ ಎಂಬವರು ದೂರು ನೀಡಿದ್ದು, ಜೂ.24 ರಂದು ಬೆಳಿಗ್ಗೆ ಸದ್ರಿ ದೈವಸ್ಥಾನದ ಬಳಿ ಶುಚಿಗೊಳಿಸುತ್ತಿದ್ದ ಸಮಯ, ಬಾಗಿಲಿನ ಚಿಲಕದ ಲಾಕ್ ತುಂಡಾಗಿ ನೆಲದಲ್ಲಿ ಬಿದ್ದಿರುವುದು ಕಂಡುಬಂದಿದ್ದು, ದೈವಸ್ಥಾನದ ಕಾಣಿಕೆ ಡಬ್ಬಿಗಳು ಮುರಿದಿದ್ದು, ಸೊತ್ತುಗಳನ್ನು ಚೆಲ್ಲಾಪಿಲ್ಲಾಯಾಗಿತ್ತು.
ಈ ಬಗ್ಗೆ ಪರಿಶೀಲಿಸಲಾಗಿ 23-06-2024 ರಂದು ಸಂಜೆಯಿಂದ ದಿನಾಂಕ: 24-6-2024 ರಂದು ಬೆಳಿಗ್ಗಿನ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ದೈವಸ್ಥಾನದಲ್ಲಿ ಕಾಣಿಕೆ ಡಬ್ಬಿ ಹಾಗೂ ಭಜನೆಯ ಬಾಬ್ತು ನಗದು ಹಣವನ್ನು ಸೇರಿ ಸುಮಾರು 10,000/- ರೂಪಾಯಿ ಹಣವನ್ನು ಕಳವು ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ- 109/2024 ಕಲಂ: 457, 380 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಅಂತರ ಎಂಬಲ್ಲಿರುವ, ಸಾಲ್ಯಾನ ಕುಟುಂಬದ ತರವಾಡು ದೈವಸ್ಥಾನದ ಅಧ್ಯಕ್ಷರಾದ ಕೊರಗಪ್ಪ ಸಾಲ್ಯಾನ್ ಎಂಬವರು ದೂರು ನೀಡಿದ್ದು, ಜೂ. 23 ರಂದು ರಾತ್ರಿ ಯಾರೋ ಕಳ್ಳರು ದೈವಸ್ಥಾನದ ಬೀಗವನ್ನು ಮುರಿದು ಒಳಪ್ರವೇಶಿಸಿ, ಕಾಣಿಕೆಯ ಡಬ್ಬಿಯ ಬೀಗ ಮುರಿದು ಅದರಲ್ಲಿಯ 1000/- ರೂ ಹಣವನ್ನು ಕಳ್ಳತನ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ 108/2024 ಕಲಂ: 457, 380 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























