ಉಪ್ಪಿನಂಗಡಿ ಮೂಲದ ಜಲಾಲಿಯ್ಯ ಅಜ್ಮೀರ್ ಝಿಯಾರತ್ ಟೂರ್ ಏಜೆನ್ಸಿ ವಿರುದ್ಧ ವಂಚನೆಯ ಆರೋಪ ಕೇಳಿ ಬಂದಿದ್ದು, ಟೂರ್ ಏಜನ್ಸಿ ಅಜ್ಮೀರ್ ಯಾತ್ರೆಗೆ ಕರೆದುಕೊಂಡು ಹೋಗಿ ಹಣ ವಂಚಿಸಿದೆ ಎಂದು ಯಾತ್ರಾರ್ಥಿ ಕುಟುಂಬವೊಂದು ಬೆಂಗಳೂರಿನ ಪದ್ಮನಾಭನಗರ ಪೊಲೀಸ್ ಠಾಣೆಗೆ ದೂರು ನೀಡಿದೆ.
ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಟಿಯ ಫಾರೂಕ್ ಎಂಬವರಿಗೆ ಸೇರಿದ ಈ ಟೂರ್ ಏಜೆನ್ಸಿ ಮೂಲಕ ಆತೂರು ಮೂಲದ ಮಹಮ್ಮದ್ ತ್ವಾಹ ಮತ್ತು ಕುಟುಂಬಸ್ಥರು ಸೇರಿ ಒಟ್ಟು 60 ಯಾತ್ರಿಕರಿದ್ದ ತಂಡ ಅಜ್ಮೀರ್ ಯಾತ್ರೆಗೆ ತೆರಳಿತ್ತು. ಫಾರೂಕ್ ಅವರ ಟೂರ್ ಏಜೆನ್ಸಿ ಮೂಲಕ ಬೆಂಗಳೂರಿನಿಂದ ಅಜ್ಮೀರ್ ಗೆ ತಂಡ ತೆರಳಿತ್ತು. 60 ಸಾವಿರದ ಪ್ಯಾಕೇಜ್ ಮೂಲಕ ಅಜ್ಮೀರ್ ಯಾತ್ರೆಗೆ ತೆರಳಿದ್ದರು. ಆದರೆ ಅಜ್ಮೀರ್ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಮಹಮ್ಮದ್ ತ್ವಾಹ ಫ್ಯಾಮಿಲಿ ಅವರಲ್ಲಿ ಟೂರ್ ಏಜೆನ್ಸಿ ಸಿಬ್ಬಂದಿ ಹೆಚ್ಚುವರಿ ಹಣ ಕೇಳಿದ್ದಾರೆ ಎಂದು ಆರೋಪಿಸಿದ್ದಾರೆ.
ನಾವು ಕೊಡಲ್ಲ. ಯಾಕೆ ಹೆಚ್ಚುವರಿಯಾಗಿ ಹಣ ಕೊಡಬೇಕು ಎಂದು ಪ್ರಶ್ನಿಸಿದಾಗ ಯಾತ್ರಿಕರಿಗೆ ಟೂರ್ ಏಜೆನ್ಸಿ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇದೇ ರೀತಿ ಜಲಾಲಿಯ್ಯ ಅಜ್ಮೀರ್ ಝಿಯಾರತ್ ಟೂರ್ ಏಜೆನ್ಸಿಯವರು ಪ್ರತೀ ಪ್ಯಾಕೇಜ್ ಟೂರುಗಳಲ್ಲೂ ಯಾತ್ರಿಕರಿಗೆ ಇದೇ ರೀತಿ ಹಣ ವಂಚಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರಶ್ನಿಸಿದವರ ಮೇಲೆ ಟೂರ್ ಏಜೆನ್ಸಿ ಸಿಬ್ಬಂದಿ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಮಹಮ್ಮದ್ ತ್ವಾಹ ಕುಟುಂಬಸ್ಥರು ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಲಾಗಿದ್ದು, ಮಹಮ್ಮದ್ ತ್ವಾಹ ಅವರ ಕುಟುಂಬದ ಅಬ್ದುಲ್ ರಝಾಕ್ ಮೇಲೆ ಏಜೆನ್ಸಿ ಸಿಬ್ಬಂದಿ ಬಸ್ಸಿನಲ್ಲಿಯೇ ಗಂಭೀರವಾಗಿ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಅಬ್ದುಲ್ ರಝಾಕ್ ಬೆಂಗಳೂರಿನ ಪದ್ಮನಾಭನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

























