ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ಅಬ್ಬರ ಜೋರಾಗಿದೆ. ಇದೀಗ ಮಳೆ ನಿಂತರೂ ವರುಣಾರ್ಭಟದಿಂದ ಉಂಟಾದ ಅವಾಂತರಗಳು ನಿಂತಿಲ್ಲ. ನಗರದ ಕೊಟ್ಟಾರ ಬಳಿಯ ಬಂಗ್ರ ಕುಳೂರು ಬಳಿ ರಾಜಕಾಲುವೆಯ ತಡೆಗೋಡೆ ಕುಸಿದು ರಾಷ್ಟ್ರೀಯ ಹೆದ್ದಾರಿ 66 ಸಂಪರ್ಕಿಸುವ ಬಂಗ್ರ ಕುಳೂರು ಭಾಗದ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ.

ರಾಜಕಾಲುವೆ ತಡೆಗೋಡೆ ಕುಸಿದ ಪರಿಣಾಮ ಡಾಂಬರು ರಸ್ತೆಯಲ್ಲಿ ಭಾರೀ ಬಿರುಕು ಸೃಷ್ಟಿಯಾಗಿದೆ. ರಸ್ತೆ ಬಿರುಕು ಬಿಟ್ಟು ಕ್ಷಣ ಕ್ಷಣಕ್ಕೂ ರಸ್ತೆಯಲ್ಲಿ ಮಣ್ಣು ಕುಸಿಯುತ್ತಿರುವ ಕಾರಣ ಸಂಚಾರ ಬಂದ್ ಮಾಡಲಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ಹಲವು ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಸದ್ಯ ಪರ್ಯಾಯ ಮಾರ್ಗದ ಮೂಲಕ ಖಾಸಗಿ ಜಾಗದಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯುತ್ ಕಂಬಗಳನ್ನು ಕೂಡ ಸ್ಥಳಾಂತರ ಮಾಡಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಮಳೆ ಮತ್ತಷ್ಟು ಸುರಿದರೆ ಸಂಪೂರ್ಣ ರಸ್ತೆ ರಾಜಕಾಲುವೆ ಪಾಲಾಗುವ ಆತಂಕ ಎದುರಾಗಿದೆ. ರಸ್ತೆ ಪಕ್ಕದ ಕೆಲ ಮನೆಗಳು ಕೂಡ ಅಪಾಯದಲ್ಲಿವೆ. 10 ಕ್ಕೂ ಹೆಚ್ಚು ಮನೆಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.


























