ಅಮೇರಿಕಾ : ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದಲ್ಲೂ ಶಿಕ್ಷಕರ ಪಾತ್ರ ಅಪಾರವಾದದ್ದು, ಅವರು ನಡೆಯುವ ದಾರಿ ಸಾವಿರಾರು ಮಕ್ಕಳಿಗೆ ದಾರಿದೀಪ. ಹೀಗೆ ತಮ್ಮ ಶಿಷ್ಯರನ್ನು ತಿದ್ದಿ ತೀಡಿ ಅವರಿಗೆ ಉತ್ತಮ ಸಂಸ್ಕಾರ, ವಿದ್ಯೆಯನ್ನು ಧಾರೆಯೆರೆಯುವ ಗುರುಗಳಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಆದ್ರೆ ಇಲ್ಲೊಬ್ಬ ಶಿಕ್ಷಕಿ ವೃತ್ತಿ ಮೌಲ್ಯ, ತನ್ನ ಕರ್ತವ್ಯವನ್ನೇ ಮರೆತು ಶಾಲೆಯ ಅಪ್ರಾಪ್ತ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಲೈಂಗಿಕ ಕಿರುಕುಳದ ಆರೋಪದಡಿ ಶಿಕ್ಷಕಿಯನ್ನು ಬಂಧಿಸಲಾಗಿದೆ.
ಈ ಆಘಾತಕಾರಿ ಘಟನೆ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದಿದ್ದು, ಅಪ್ರಾಪ್ತ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಫ್ರೀಹೋಲ್ಡ್ ಇಂಟರ್ ಮೀಡಿಯೇಟ್ ಶಾಲೆಯ ಶಿಕ್ಷಕಿ ಅಲಿಸನ್ ಹ್ಯಾವ್‌ಮೆನ್ ರನ್ನು (43) ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಇದೀಗ ನ್ಯೂಜೆರ್ಸಿಯ ಶಾಲೆಯೊಂದರಲ್ಲಿಯೂ ಇಂತಹದೇ ಪ್ರಕರಣ ಬೆಳಕಿಗೆ ಬಂದಿದೆ.
ಈ ವರ್ಷದ ಆರಂಭದಲ್ಲಿಯೇ ಅಲಿಸನ್ ವಿದ್ಯಾರ್ಥಿಯೊಬ್ಬನಿಗೆ ಲೈಂಗಿಕ ಕಿರುಕುಳವನ್ನು ನೀಡಲು ಪ್ರಾರಂಭಿಸಿದ್ದು, ಈ ವಿಷಯ ಹೊರ ಬೀಳುತ್ತಿದ್ದಂತೆ ಪೊಲೀಸರು ಶಿಕ್ಷಕಿಯ ವಿರುದ್ಧ ಪ್ರಕರಣವನ್ನು ದಾಖಲಿಸಿ, ಆಕೆಯನ್ನು ಬಂಧಿಸಿದ್ದಾರೆ. ಪ್ರಸ್ತುತ ಈ ಶಿಕ್ಷಕಿಯನ್ನು ಹೆಚ್ಚಿನ ವಿಚಾರಣೆಗಾಗಿ ಮಾನ್‌ಮೌತ್ ಕೌಂಟಿಯ ಜೈಲಿನಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ.


























