ಬಂಟ್ವಾಳ : ವ್ಯಕ್ತಿಯೋರ್ವ ಸ್ನೇಹಿತರೊಂದಿಗೆ ಮೀನು ಹಿಡಿಯಲು ತೆರಳಿದ ವೇಳೆ ನದಿಗೆ ಬಿದ್ದು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಮೈಕಲ್ ಡಿ ಮೆಲ್ಲೊ ರವರ ಪುತ್ರ ಮೆಲ್ರೊಯ್ ಡಿ ಮೆಲ್ಲೊ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಮೈಕಲ್ ಡಿ ಮೆಲ್ಲೊ (52) ಜು.4 ರಂದು ಬೆಳಿಗ್ಗೆ, ಅವರ ಸ್ನೇಹಿತರಾದ ಕಾನ ನಿವಾಸಿ ಸುದೀಪ್ ಎಂಬವರೊಂದಿಗೆ, ಬಂಟ್ವಾಳ ತಾಲೂಕಿನ ಅಜಿಲಮೊಗರು ಎಂಬಲ್ಲಿಗೆ ಹೋಗಿದ್ದು,
ಅದೇ ದಿನ ಸಂಜೆ ಸಮಯ, ಅಜಿಲಮೊಗರಿನ ಕೂಟೆಲ್ ಬಿಡ್ಜ್ ಬಳಿ ಬಂದು ನೇತ್ರಾವತಿ ನದಿಯಲ್ಲಿ ಅವರ ಸ್ನೇಹಿತರು ಮೀನು ಹಿಡಿಯಲು ಗಾಳ ಹಾಕುತ್ತಿರುವುದನ್ನು ನೋಡುತ್ತಿದ್ದ ಮೈಕಲ್ ಅವರು ಆಕಸ್ಮಿಕವಾಗಿ ಕಾಲು ಜಾರಿ ವೀಪರಿತ ಮಳೆಯಿಂದ ತುಂಬಿ ಹರಿಯುತ್ತಿದ್ದ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಈ ವೇಳೆ ಅವರ ಸ್ನೇಹಿತ ಸುದೀಪ್ ಮತ್ತು ಇತರರು ಅವರನ್ನು ನೀರಿನಿಂದ ರಕ್ಷಿಸಲು ಪ್ರಯತ್ನಪಟ್ಟಿದ್ದು ಸಾಧ್ಯವಾಗಿರಲಿಲ್ಲ. ನಂತರ ಊರಿನವರು ಮತ್ತು ಅಗ್ನಿಶಾಮಕದಳದವರು ಎಲ್ಲಾ ಸೇರಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಜು. 5ರಂದು ಕೂಟೆಲ್ ಬಿಡ್ಜ್ ಬಳಿ ನೀರಿನ ಆಳದಲ್ಲಿ ಮೃತದೇಹ ಪತ್ತೆಯಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ, ಯು ಡಿ ಆರ್ ನಂಬ್ರ 26/2024, ಕಲಂ : ಕಲಂ: 194 ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) 2023 ರಂತೆ ಪ್ರಕರಣ ದಾಖಲಾಗಿರುತ್ತದೆ.